ಪ್ರತಿಯೊಬ್ಬರಿಗೂ ಕಾನೂನು ಅರಿವಿರಲಿ: ನ್ಯಾ. ಸಂಕೊಳ್ಳಿ
ಕ.ಪ್ರ.ವಾರ್ತೆ ಮೈಸೂರು ಸೆ. 21
ಪ್ರತಿಯೊಬ್ಬರು ಕಾನೂನು ಹಾಗೂ ಹಕ್ಕಿನ ಬಗ್ಗೆ ಅರಿವನ್ನು ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಶ್ರೀಪಾದ ಸಂಕೊಳ್ಳಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಂತ ಜೋಸೆಫರ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಣ ಪ್ರಶಿಕ್ಷಣಾರ್ಥಿಗಳಿಗೆ ಬಾಲನ್ಯಾಯ ಕಾಯ್ದೆ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಲಯಕ್ಕೆ ಬರುವ ಅನೇಕ ಪ್ರಕರಣಗಳನ್ನು ಗಮನಿಸಿದಾಗ, ಶೇ.100 ಮಂದಿಯಲ್ಲಿ ಶೇ.90 ಮಂದಿಗೆ ಕಾನೂನು ಬಗ್ಗೆಯಾಗಲಿ ಹಾಗೂ ತಮ್ಮ ಹಕ್ಕಿನ ಬಗ್ಗೆಯಾಗಲಿ ತಿಳಿವಳಿಕೆ ಇರುವುದಿಲ್ಲ. ಜನಸಾಮಾನ್ಯರಲ್ಲಿ ಕಾನೂನು ಅರಿವಿನ ಕೊರತೆ ಇರುವುದು ಕಂಡುಬಂದಿದೆ. ಪ್ರತಿಯೊಂದು ಹಂತದಲ್ಲಿಯೂ ಕಾನೂನು ತಿಳಿದುಕೊಳ್ಳುವುದು ಅವಶ್ಯ ಎಂದರು.
ಶಿಕ್ಷಕನಾಗುವ ಆಸೆಯಿತ್ತು: ನನಗೂ ಶಿಕ್ಷಕನಾಗಿ ಪಾಠ ಮಾಡಬೇಕು ಎಂಬ ಆಸೆಯಿತ್ತು. ಆದರೆ ನಾನು ಕಾರಣಾಂತರಗಳಿಂದ ನ್ಯಾಯಾಧೀಶನಾದೆ. ಶಿಕ್ಷಕರು ಸಕಾರಾತ್ಮಕ ಭಾವನೆಯನ್ನು ಮಕ್ಕಳಲ್ಲಿ ತುಂಬುವ ಮೂಲಕ ಕಲಿಸುವ ಅಗತ್ಯವಿದೆ. ಹಾಗೇಯೇ ವಿದ್ಯಾರ್ಥಿಗಳು ಸಹ ಸ್ವಂತ ಅಧ್ಯಯನದ ಮಾಡಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಇದರ ಜತೆಗೆ ಕಾನೂನು ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ನಂದಕುಮಾರ್ ಮಾತನಾಡಿ, 2000ರಲ್ಲಿ ಬಾಲ ನ್ಯಾಯ ಕಾಯ್ದೆ ಜಾರಿಗೊಂಡಿತ್ತು. ಇದರ ಪ್ರಕಾರ 18 ವರ್ಷದೊಳಗಿನ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾದರೆ ಅವರ ಮನಃ ಪರಿರ್ವತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಅವಕಾಶ ಕಲ್ಪಿಸಲಾಯಿತು ಎಂದರು.
ಅರಿವು ಅವಶ್ಯ: ನಮಗೆ ಸಂವಿಧಾನವು ನೀಡಿರುವ ಹಕ್ಕನ್ನು ಮಾತ್ರ ಚಲಾಯಿಸಲು ಹೆಚ್ಚಾಗಿ ಮುಂದಾಗುತ್ತೇವೆ. ಆದರೆ ನಿರ್ವಹಿಸಬೇಕಾದ ಮೂಲ ಕರ್ತವ್ಯಗಳನ್ನೂ ಪ್ರಾಮಾಣಿಕವಾಗಿ ನಿರ್ವಹಿಸುವುದನ್ನು ಮರೆತ್ತಿದ್ದೇವೆ. ಇದರಿಂದಾಗಿ ಸಮಾಜದ ಅನೇಕ ಸಮಸ್ಯೆಗಳು ಪರಿಹಾರವಾಗದೆ ಉಳಿದಿದೆ. ಪ್ರತಿಯೊಬ್ಬ ನಾಗರಿಕ ಕಾನೂನಿನ ಪ್ರಾಥಮಿಕ ತಿಳಿವಳಿಕೆ ಅವಶ್ಯ ಎಂದು ಅವರು ತಿಳಿಸಿದರು.
ಸಂತ ಜೋಸೆಫರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಮಾರ್ಸೆಲ್ ಇನೊಸ್, ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಮಾರ್ಜರಿ ಲೋಬೊ ಇದ್ದರು. ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಾಲನ್ಯಾಯ ಮಂಡಲಿ ಸದಸ್ಯ ಪಿ.ಪಿ. ಬಾಬುರಾಜ್ ಉಪನ್ಯಾಸ ನೀಡಿದರು.