ಸ್ಥಳ ಪರಿಶೀಲಿಸಿ ನಂತರ ಬಿಲ್ ಮಾಡಿ: ಶಾಸಕ
ಪಿರಿಯಾಪಟ್ಟಣ: ಎಂಜಿನಿಯರ್‌ಗಳು ಕೆಲಸ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು, ಸುಮ್ಮನೆ ಕುಳಿತು ಕಚೇರಿಯಲ್ಲಿ ಬಿಲ್‌ಗಳನ್ನು ಪಾಸು ಮಾಡಬಾರದು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹೆಚ್ಚಾಗಿ ನೀರಾವರಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬಂದ ದೂರುಗಳ ಆಲಿಸಿದ ಶಾಸಕರು, ಎಂಜಿನಿಯರ್‌ಗಳು ಕೆಲಸ ನಡೆಯುವ ಸ್ಥಳಗಳಿಗೆ ಖುದ್ದು ಭೇಟಿ ನೀಡಬೇಕು. ಗುತ್ತಿಗೆದಾರರಿಗೆ ಬಿಟ್ಟು ಕೂರುವಂತಿಲ್ಲ. ಸ್ಥಳದಲ್ಲಿ ನಿಜವಾಗಿಯೂ ಆಗಬೇಕಾದ ಕೆಲಸಗಳನ್ನು ಮುತುವರ್ಜಿಯಿಂದ ಮಾಡಿಸಬೇಕೆಂದು ತಾಕೀತು ಮಾಡಿದರು. ಚಪ್ಪರದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ, ಒಡೆದಿರುವ ಹಾಗೂ ಶಿಥಿಲಗೊಂಡಿರುವ ಕಾಲುವೆಗಳನ್ನು ದುರಸ್ತಿ ಮಾಡಿಸುವಂತೆ, ಒತ್ತುವರಿಯಾಗಿರುವ ಸರ್ಕಾರಿ ಜಾಗ ಹಾಗೂ ಕೆರೆಗಳ ಒತ್ತುವರಿಯನ್ನು ಬಿಡಿಸುವಂತೆ ಮನವಿ ಮಾಡಿದರು. ಚಪ್ಪರದಹಳ್ಳಿ ಗ್ರಾಪಂಯಲ್ಲಿ ಮನೆ ಮಂಜೂರಾದ ವಿಚಾರದಲ್ಲಿ ಅನ್ಯಾಯವಾಗಿದ್ದು, ಸೂಕ್ತ ಫಲಾನುಭವಿಗಳಿಗೆ ಕೊಡದೆ ತಮಗೆ ಬೇಕಾದವರಿಗೆ ಮಂಜೂರು ಮಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದಸ್ಯ ಜಿ.ಸಿ. ಪ್ರಕಾಶ್ ಶಾಸಕರಲ್ಲಿ ಮನವಿ ಮಾಡಿದರು.
'ಬೆಟ್ಟದಪುರದಲ್ಲಿ ಶೀಘ್ರದಲ್ಲೇ ಉಪ ನೋಂದಣಾಧಿಕಾರಿಗಳ ಕಚೇರಿ'
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದಲ್ಲಿ ಅತಿ ಶೀಘ್ರದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ತೆರೆಯಲಾಗುತ್ತದೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು. ಹಲಗನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಹಲವಾರು ರಸ್ತೆಗಳ ಅಭಿವೃದ್ಧಿ ಕೆಲಸಗಳು ಆಯವ್ಯಯದಲ್ಲಿ ಸೇರಿಸಲಾಗಿದ್ದು, 4 ರಿಂದ 5 ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಲಿದೆ. ಪ್ರಸ್ತುತ ನಮ್ಮದೆ ಸರ್ಕಾರ ಇರುವ ಕಾರಣ ಹಂತ ಹಂತವಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ನಿಂತು ಹೋಗಿರುವ ಬಗ್ಗೆ ತಾಲೂಕಿನಾದ್ಯಂತೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಫಲಾನುಭವಿಗಳು ಚಿಂತಿಸುವ ಅಗತ್ಯವಿಲ್ಲ. ಹಿಂದಿನ ವೇತನ ಮಂಜೂರಾತಿ ಪತ್ರ ಹಾಗೂ 4 ಫೋಟೋಗಳನ್ನು ಹತ್ತಿರದ ನಾಡ ಕಚೇರಿಯಲ್ಲಿ ಸಲ್ಲಿಸಿದಲ್ಲಿ ತಕ್ಷಣ ಹಣ ಮಂಜೂರು ಮಾಡುವುದಾಗಿ ತಿಳಿಸಿದರು. ತಾಪಂ ಸದಸ್ಯ ಅತ್ತರ್‌ಮತಿನ್ ಮಾತನಾಡಿ, ಬೆಟ್ಟದಪುರ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸುವಂತೆ ಹಾಗೂ ತಾಲೂಕಿಗೆ ಬಸವ ವಸತಿ ಯೋಜನೆಯ ಮನೆಗಳನ್ನು ಹೆಚ್ಚಾಗಿ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು. ಜಿಪಂ ಸದಸ್ಯೆ ಮಂಜುಳಾರಾಜ್, ತಾಪಂ ಸದಸ್ಯೆ ಬಿ.ವಿ. ಅನಿತಾ, ಉಪ ತಹಸೀಲ್ದಾರ್ ರವಿಶಂಕರ್, ಸಣ್ಣರಾಮಪ್ಪ, ಪ್ರಭಾರ ಇಒ ಸಿ.ಸಿ. ಮನೋಹರ್, ಚಪ್ಪರದಹಳ್ಳಿ ಗ್ರಾಪಂ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷೆ ಗೌರಮ್ಮ, ಹಲಗನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ, ಎಂಜಿನಿಯರ್‌ಗಳಾದ ಎನ್. ಸಿದ್ದರಾಜ್, ಚಂದ್ರಪ್ಪ, ಮಂಜುನಾಥ್, ರಂಗುಪ್ರಕಾಶ್, ಪಿಡಿಒಗಳಾದ ಮಹೇಂದ್ರ, ಕೆ.ಆರ್. ಬಸವರಾಜ್ ಇದ್ದರು.