ದುಸ್ಥಿತಿಯಲ್ಲಿ ಉದ್ಭೂರು ಆಶ್ರಮ ಶಾಲೆ
ಎಚ್.ಡಿ. ಕೋಟೆ: ತಾಲೂಕಿನ ಉದ್ಬೂರು ಆಶ್ರಮ ಶಾಲೆಯು ಸಂಪೂರ್ಣ ದುಃಸ್ಥಿತಿಯಲ್ಲಿದ್ದು, ಮೂಲ ಸೌಲಭ್ಯವಿಲ್ಲ. ವಿದ್ಯಾಭ್ಯಾಸವೂ ಮರೀಚಿಕೆಯಾಗಿದೆ ಹಾಗೂ ಸರಿಯಾದ ಪಾಠ ಪ್ರವಚನಗಳು ನಡೆಯುತ್ತಿಲ್ಲ. ತಾಲೂಕಿನ ಕಾಡಂಚಿನ ಗ್ರಾಮಗಳಲ್ಲೊಂದಾದ ಮೈಸೂರು- ಮಾನಂದವಾಡಿ ಹೆದ್ದಾರಿಯಲ್ಲಿ ಬರುವ ಉದ್ಬೂರು ಆಶ್ರಮ ಶಾಲೆಯು, ಮೂಲಭೂತ ಸೌಕರ್ಯ ಇಲ್ಲದಿರುವುದು ಒಂದೆಡೆಯಾದರೆ ಪಾಠ ಪ್ರವಚನಗಳಲ್ಲಿ ಹಿಂದುಳಿದಿದೆ. ತಾಲೂಕಿನಲ್ಲಿ ಸುಮಾರು 10 ಆಶ್ರಮ ಶಾಲೆಗಳಿದ್ದು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆಶ್ರಮ ಶಾಲೆಯಲ್ಲಿನ ಶೌಚಾಲಯಗಳಿಗೆ ಬಾಗಿಲೇ ಇಲ್ಲ. ಕಕ್ಕಸು ಗುಂಡಿಯನ್ನು ಮುಚ್ಚಿಲ್ಲ. ಇದರಿಂದ ದುರ್ವಾಸನೆ ಬೀರುತ್ತಿದ್ದು ವಿದ್ಯಾರ್ಥಿಗಳು ದುರ್ವಾಸನೆ ತಡೆದುಕೊಂಡೆ ಇಲ್ಲಿ ವ್ಯಾಸಂಗ ಮಾಡಬೇಕಾದ ಅನಿವಾರ್ಯ ಇದೆ. ಸೋಲಾರ್ ದೀಪ, ಸೋಲಾರ್ ನೀರು ಕಾಯಿಸುವ ಯಂತ್ರ ಅಳವಡಿಸಿದೆಯಾದರೂ ಮಕ್ಕಳಿಗೆ ಬಿಸಿ ನೀರು ಇಲ್ಲದಂತಾಗಿದೆ. 2005-06ರಲ್ಲಿ ದತ್ತು ಗ್ರಾಮ ಗಿರಿಜನ ಯೋಜನೆಯಡಿ ಆದಿವಾಸಿಗಳಿಗೆ ವಿತರಿಸಲೆಂದು ತರಲಾಗಿದ್ದ ಟ್ರೈಲರ್, ಪೈಪು ಮತ್ತು ಇತರೆ ವ್ಯವಸಾಯದ ಸಲಕರಣೆಗಳು ಶಾಲಾ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಶಿಕ್ಷಕರಿಗೆ 1 ವರ್ಷದಿಂದ ವೇತನವೇ ಆಗಿಲ್ಲ. ಆ ಕಾರಣ ಶೀಘ್ರದಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು.
- ದಿನೇಶ್, ಶಿಕ್ಷಕರು