ಮಧ್ವರು ಕನ್ನಡಿಗರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ
ಕ.ಪ್ರ.ವಾರ್ತೆ ಮೈಸೂರು ಸೆ. 22
ಕನ್ನಡ ನಾಡಿನಲ್ಲಿ ಭಕ್ತಿ ಪರಂಪರೆ ಹುಟ್ಟುಹಾಕಿದ ಮಧ್ವಾಚಾರ್ಯರ ಬಗ್ಗೆ ಕನ್ನಡಿಗರು ತಿಳಿದುಕೊಳ್ಳದಿರುವುದು ವಿಪರ್ಯಾಸ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ವಿಷಾದಿಸಿದರು.
ಶ್ರೀ ಕೃಷ್ಣತಾತ್ಪರ್ಯ ಯಕ್ಷವೃಂದ ವತಿಯಿಂದ ಭಾನುವಾರ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೈ. ಕೃಷ್ಣಕುಮಾರಾಚಾರ್ಯರು ರಚಿಸಿರುವ ಶ್ರೀಪೂರ್ಣಪ್ರಜ್ಞ ವಿಜಯ ಯಕ್ಷಗಾನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದೇಶಿಗರ ದಾಳಿಯಿಂದ ನಮ್ಮ ನಾಡಿನ ಸಂಸ್ಕೃತಿ ಅಧಃಪತನವಾಗುವ ಸಂದರ್ಭದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಪರ್ಯಟನೆ ಮಾಡಿದ ಶ್ರೀ ಮಧ್ವಾಚಾರ್ಯರು ಭಕ್ತಿ ಕ್ರಾಂತಿ ಹುಟ್ಟುಹಾಕಿದರು. ತುಳಸಿದಾಸರು ಇವರ ಕ್ರಾಂತಿಯಿಂದ ಪ್ರೇರಿತರಾಗಿ ಭಕ್ತಿ ಚಳವಳಿಗೆ ಬೆಂಬಲ ನೀಡಿದರು. ಭಕ್ತಿಯ ಬಗೆಗಿನ ಅನೇಕ ಅಂಶಗಳನ್ನು ಸಾಮಾನ್ಯರಿಗೂ ಅವರವರ ಭಾಷೆಯಲ್ಲಿ ತಿಳಿಸುವಂತೆ ಕರೆ ಕೊಟ್ಟಿದ್ದು ಇತಿಹಾಸ. ಅಂತಹ ಮಹಾತ್ಮರು ನಮ್ಮ ನಾಡಿವರು ಎಂದು ಹೆಮ್ಮೆ ಪಟ್ಟುಕೊಳ್ಳುವವರು ಇಲ್ಲವಾಗಿದ್ದಾರೆ. ಕರಾವಳಿ ಜನರು ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ ಎಂದರು.
ಅಪಪ್ರಚಾರ: ಹಿಂದೆ ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು ಎಂದು ಅಪಪ್ರಚಾರ ಮಾಡಿ ಗೋಮಾತೆ ಬಗೆಗಿನ ಭಕ್ತಿಯನ್ನು ಕಡಿಮೆ ಮಾಡುವಂತ ಪ್ರಯತ್ನಗಳು ನಡೆಯುತ್ತಿವೆ. ಇದು ಸತ್ಯಕ್ಕೆ ದೂರವಾದದು. ಗೋಮಾತೆ ನೀಡುತ್ತಿದ್ದ ಹಾಲು, ತುಪ್ಪವನ್ನು ಯಜ್ಞಗಳಲ್ಲಿ ಅರ್ಪಿಸಲಾಗುತ್ತಿತ್ತೆ ಹೊರತು ಗೋಮಾಂಸ ತಿನ್ನುತ್ತಿರಲಿಲ್ಲ. ಈ ವಿಚಾರದ ಬಗ್ಗೆಯೂ ಮಧ್ವರು ಸ್ಪಷ್ಟನೆ ನೀಡಿದ್ದರು. ಕನ್ನಡಿಗರಿಗೆ ಈ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ದೀನ ದಲಿತರಿಗೆ ಸಹಾಯ ಮಾಡುವ ಮೂಲಕ ಮೋಕ್ಷ ಕಾಣಬೇಕಿದೆ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ಒಂದು ರೀತಿಯಲ್ಲಿ ಶಿಕ್ಷಣವಿದ್ದ ಹಾಗೆ. ಇದು ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಾರಗೊಂಡಿತು. ಪುರಾಣದ ಕಥೆಗಳನ್ನು ಸಾಮಾನ್ಯರಿಗೆ ತಿಳಿಸಲು ಯಕ್ಷಗಾನ ಮಾಧ್ಯಮವಾಗಿ ಬಳಕೆಯಾಯಿತು. ಯಕ್ಷಗಾನದಲ್ಲಿನ ಒಳ್ಳೆಯ ನೀತಿ ಕಥೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳವಣಿಗೆ ಹೊಂದುವಂತೆ ಶ್ರೀಗಳು ತಿಳಿಸಿದರು.
ಮಧ್ವಾಚಾರ್ಯರ ಸಮಕಾಲೀನರೂ ಆಗಿದ್ದ ನಾರಾಯಣ ಪಂಡಿತಾಚಾರ್ಯರು ರಚಿಸಿದ್ದ ಸುಮಧ್ವ ವಿಜಯ ಸಂಸ್ಕೃತ ಕೃತಿಯನ್ನು ಆಧಾರವಾಗಿಟ್ಟುಕೊಂಡು ಕೈ. ಕೃಷ್ಣಮಾರಾಚಾರ್ಯರು ರಚಿಸಿರುವ ಶ್ರೀಪೂರ್ಣಪ್ರಜ್ಞ ವಿಜಯ ಯಕ್ಷಗಾನ ಕೃತಿಯ ಬಗೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಯಕ್ಷಗಾನ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅನಿಸಿಕೆ ವ್ಯಕ್ತಪಡಿಸಿದರು.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪ್ರಹ್ಲಾದಾಚಾರ್ಯ, ಸಮಾಜ ಸೇವಕ ಕೆ.ರಘುರಾಂ, ವಿಜಯ ವಿಠ್ಠಲ ವಿದ್ಯಾಶಾಲೆಯ ಕಾರ್ಯದರ್ಶಿ ಆರ್. ವಾಸುದೇವ ಭಟ್, ಹಿರಿಯ ಚಿಂತಕ ಜಿ.ಎಸ್. ಭಟ್ಟ, ಕೆ.ವಿ. ಶ್ರೀಧರ್, ಪಿ.ವಿ. ನಾಗೇಶ್, ರಾಜಗೋಪಾಲ್, ಕೃತಿ ಕರ್ತೃ ಕೈ. ಕೃಷ್ಣಕುಮಾರಾಚಾರ್ಯ ಇದ್ದರು. ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ಪೂರ್ಣಪ್ರಜ್ಞ ವಿಜಯ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸಿದರು. ಪ್ರೊ.ಎಂ.ಎಲ್. ಸಾಮಗ ಅವರು ಮಧ್ವಾಚಾರ್ಯರ ಪಾತ್ರ ನಿರ್ವಹಿಸಿದರು.