ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳಾ ಸಂಘದಿಂದ ಸವಲತ್ತು

Srinivasa Murthy VN
Updated On : 22 Sept 2013, 11:50 am

ಕ.ಪ್ರ.ವಾರ್ತೆ ಭೇರ್ಯ ಸೆ. 22
ನ್ಯಾಯಬೆಲೆ ಅಂಗಡಿ ಮತ್ತು ಸರ್ಕಾರದ ವಿವಿಧ ಸವಲತ್ತುಗಳನ್ನು ಸ್ತ್ರೀಶಕ್ತಿ ಮಹಿಳಾ ಸಂಘಗಳ ಮೂಲಕ ವಿತರಿಸಿಲು ಸರ್ಕಾರ ಚಿಂತನೆ ನಡೆಸಿದ್ದು, ಬಹಳ ಒಳ್ಳೆಯ ಕಾರ್ಯಕ್ರಮ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಭೇರ್ಯದ ಶ್ರೀಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ 3 ಸಾವಿರ ಮಹಿಳಾ ಸಂಘಗಳಿಗೆ ಆರ್ಥಿಕ ನೆರವು ನೀಡಿದ್ದು ಸಂಘಗಳು ಅಭಿವೃದ್ಧಿ ಹೊಂದಿವೆ. ಮಹಿಳೆಯರು ತಮ್ಮ ಸ್ವಾಲಂಬಿ ಬದಕು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದರು. ತಾಲೂಕಿನಲ್ಲಿ ಮಹಿಳಾ ಸಂಘಗಳ ಅಕ್ಕ- ತಂಗಿಯರು ಹಣ ಮತ್ತು ಮತವನ್ನು ಕೊಟ್ಟು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಎಂದರೆ ನಾನೇ ಪುಣ್ಯವಂತ. ಕೆ.ಆರ್.ನಗರದಲ್ಲಿ ಒಂದು ಮಹಿಳಾ ಬ್ಯಾಂಕ್ ಸ್ಥಾಪಿಸಲು ಚಿಂತಿಸಲಾಗಿದ್ದು ರಿಸರ್ವ್ ಬ್ಯಾಂಕ್ ಅನುಮತಿಗಾಗಿ ಕಾಯುತ್ತಿದ್ದೇವೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಿನಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದರ ಜತೆಗೆ ಕೃಷಿ, ಹೈನುಗಾರಿಕೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
12 ಕೋಟಿ ವಹಿವಾಟು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳನ್ನು ಪ್ರಾರಂಭಿಸಿದ್ದು 2012-13ಸೇ ಸಾಲಿನಲ್ಲಿ 12 ಕೋಟಿ ವಹಿವಾಟು ನಡೆಸಿದೆ. ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವಾರು ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಉದ್ದೇಶ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಜಯಮಾಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದೀಕ್ಖಾನ್, ಎಪಿಎಂಸಿ ನಿರ್ದೇಶಕ ಎಚ್.ಕೆ. ಓಬೇಗೌಡ, ಪಶುವೈದ್ಯಾಧಿಕಾರಿ ಡಾ.ಹರೀಶ್, ಪತ್ರಕರ್ತ ಭೇರ್ಯ ಮಹೇಶ್, ಸಿ.ಸಿ. ಮಹದೇವು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಅನಿತಾ, ಜಯಶ್ರೀ, ಸಮನ್ವಯ ಅಧಿಕಾರಿ ಗೀತಾ, ಸೇವಾ ಪ್ರತಿನಿಧಿಗಳಾದ ಶೋಭಾ, ಮಂಜುಳಾ, ಶೈಲಜಾ, ರಾಜಮ್ಮ, ಕರಿಯಮ್ಮ, ಹೇಮಲತಾ, ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ, ಮಂಜುಳಾ, ವಸಂತಾ, ನಾಗಮ್ಮ ಇದ್ದರು.

ಅಪ್ಪಾಜಿ ಸ್ವಾಮಿ ಅವಾಂತರ ತನಿಖೆ ನಡೆಸಿ
ಕ.ಪ್ರ.ವಾರ್ತೆ ನಂಜನಗೂಡು ಸೆ. 22
ನಂಜನಗೂಡು ದೇವಾಲಯದಲ್ಲಿ ಗುರುವಾರ ನಡೆದ ಅಪ್ಪಾಜಿ ಸ್ವಾಮಿ ಅವಾಂತರ ಕುರಿತು ತನಿಖೆ ನಡೆಸುವಂತೆ ಪುರಸಭಾ ಸದಸ್ಯ ಎನ್.ಎಂ. ಮಂಜುನಾಥ್ ಸೇರಿದಂತೆ ಹತ್ತು ಮಂದಿ ನಾಗರೀಕರು ಜಿಲ್ಲಾಧಿಕಾರಿ ಮತ್ತು ಮುಜರಾಯಿ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡು, ದೇವಾಲಯ ಆಗಮಿಕ ನೀಲಕಂಠ ದೀಕ್ಷಿತರನ್ನು ಎಲ್ಲರೆದುರೂ ನಿಂದಿಸಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಅಪ್ಪಾಜಿ ಸ್ವಾಮಿ ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸಿದಲ್ಲಿ ಯಾವುದೆ ಮರ್ಯಾದೆ ನೀಡಬಾರದು. ಕಾವಿತೊಟ್ಟು ಯತಿ ಎನಿಸಿಕೊಂಡು ಅಸಹ್ಯಕರ, ಅವಾಚ್ಯ ಮಾತುಗಳನ್ನಾಡಿರುವ ಇವರ ಬಗ್ಗೆ ಅಸಹ್ಯವಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ವೇಳೆ ತಾವು ದೇವರ ದರ್ಶನಕ್ಕೆಂದು ದೇವಾಲಯಕ್ಕೆ ತೆರಳಿದ್ದರಿಂದಾಗಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು ವಿಚಾರಣೆ ವೇಳೆ ಸಾಕ್ಷಿ ನುಡಿಯುವುದಾಗಿ ಹೇಳಿದ್ದಾರೆ. ದೇವಾಲಯದೊಳಗೆ ಪಾದುಕೆ ಹಾಕಿಕೊಂಡು ಪ್ರವೇಶಿಸುತ್ತಿದ್ದ ಸಮಯದಲ್ಲಿ ಸಿಬ್ಬಂದಿಯೊಬ್ಬರ ಸೂಚನೆಯಂತೆ ಪಾದುಕೆ ಹೊರಗೆಬಿಟ್ಟ ಅಪ್ಪಾಜಿ ಸ್ವಾಮಿ ವರ್ತನೆ ಸರಿ ಇರಲಿಲ್ಲ. ಮುಂದೆ ಇಂತಹ ವಿಲಕ್ಷಣ ಘಟನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯನ್ನು ಅವರು ಒತ್ತಾಯಿಸಿದ್ದಾರೆ.
ಪುರಸಭೆ ಮಾಜಿ ಉಪಾಧ್ಯಕ್ಷ ಎನ್.ಇಂದ್ರ, ಎಂ.ಎನ್. ಸತೀಶ್, ಮಾದಪ್ಪ, ಎಲ್.ಮಹೇಶ್, ಎನ್.ಎಸ್. ಸತೀಶ್, ರವಿಶಂಕರ್, ಕೆ. ಅರವಿಂದ್, ರಾಜೇಶ್ ಮತ್ತು ಸೋಮು ಪತ್ರಕ್ಕೆ ಸಹಿ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement