'ಮಾಂಸಾಹಾರಿ ಹೊಟೇಲ್ ತೆರೆಯದಿರಿ'
ಟಿ. ನರಸೀಪುರ: ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಜನವಸತಿ ಪ್ರದೇಶದಲ್ಲಿ ನಿವಾಸಿಗಳ ವಿರೋಧದ ನಡುವೆ ಅಕ್ರಮವಾಗಿ ಮಾಂಸಾಹಾರಿ ಹೊಟೇಲನ್ನು ತೆರೆಯಲಾಗುತ್ತಿದೆ ಎಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾಭಾರತಿ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಮೂರ್ತಿ ಆರೋಪಿಸಿದ್ದಾರೆ.
ಪಟ್ಟಣದ ವಿವೇಕಾನಂದ ನಗರದ ಎಂ.ಕುಮಾರ್ ಅವರ ನಿವಾಸದಲ್ಲಿ ಭಾನುವಾರ ನಡೆದ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜು ಜೋಡಿ ರಸ್ತೆಗೆ ಹೊಂದಿಕೊಂಡಂತಿರುವ ಜನವಸತಿ ಪ್ರದೇಶವಾದ ವಿವೇಕಾನಂದ ನಗರದಲ್ಲಿ ಸ್ಥಳೀಯರ ಆಕ್ಷೇಪವಿದ್ದರೂ ಅಕ್ರಮವಾಗಿ ಮಾಂಸಾಹಾರ ಹೊಟೇಲನ್ನು ಆರಂಭಿಸಲಾಗುತ್ತಿದೆ ಎಂದು ದೂರಿದರು.
ನೂರಾರು ಕುಟುಂಬಗಳು ವಾಸಿಸುವ ರಸ್ತೆ ಮೊದಲೆ ಕಿರಿದಾಗಿದೆ. ಜನಸಂಚಾರಕ್ಕೆ ಸೂಕ್ತವಾಗಿರದ ರಸ್ತೆಯಲ್ಲಿ ಮಾಂಸಾಹಾರ ಹೊಟೇಲನ್ನು ತೆರೆಯುವುದರಿಂದ ಓಡಾಟಕ್ಕೆ ತುಂಬಾ ತೊಂದರೆಯಾಗಲಿದೆ. ಮಾಂಸಾಹಾರದ ಹೊಟೇಲಿನಲ್ಲಿ ಪಕ್ಕದ ಮದ್ಯದಂಗಡಿಯಿಂದ ತಂದು ಮದ್ಯ ಸೇವನೆಯೂ ನಿರಂತರವಾಗಿ ನಡೆಯುವುದರಿಂದ ಕುಡಿದ ಮತ್ತಿನಲ್ಲಿರುವವರಿಂದ ಯುವತಿಯರು ಮತ್ತು ಗೃಹಿಣಿಯರು ಮುಜುಗರ ಅನುಭವಿಸಬೇಕಾಗುತ್ತದೆ ಎಂದರು.
ಎಂ.ಕೆ. ಅಡಿಗೆ ಗ್ರೂಪ್ಸ್ನ ಎಂ.ಕುಮಾರ್ ಮಾತನಾಡಿ, ಪಟ್ಟಣದ ನಿವಾಸಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸದ ಭೈರಾಪುರ ಗ್ರಾಪಂ ಆಡಳಿತ ಜನವಸತಿ ಪ್ರದೇಶದಲ್ಲಿ ಮಾಂಸಾಹಾರ ಹೊಟೇಲ್ ತೆರೆಯಲು ಕುಮ್ಮಕ್ಕು ನೀಡಲಾಗುತ್ತಿದೆ ಎಂದು ದೂರಿದರು.
ವಿವೇಕಾನಂದ ನಗರ ನಿವಾಸಿಗಳಾದ ಬಾಲಸುಬ್ರಮಣ್ಯ, ಕೆಇಬಿ ತಮ್ಮಯ್ಯ, ಸಾವಿತ್ರಮ್ಮ ಇದ್ದರು.