ವೈದ್ಯ ಸೀಟು ಕೊಡಿಸುವುದಾಗಿ ವಂಚನೆ
ಕ.ಪ್ರ.ವಾರ್ತೆ ಮೈಸೂರು ಸೆ. 22
ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಬಂಧಿಸಿ, 24.90 ಲಕ್ಷ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನ ಡಿಪಿನ್ ಮಾರೋ (29) ಮತ್ತು ಬೆಂಗಳೂರಿನ ಮನ್ಸೂರ್ ಅಹಮದ್ (28) ಬಂಧಿತ ಆರೋಪಿಗಳು. ಈ ಇಬ್ಬರನ್ನು ಪೊಲೀಸರು ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಇಬ್ಬರು ಆಂಧ್ರಪ್ರದೇಶದ ಹೈದರಾಬಾದ್‌ನ ವಿದ್ಯಾರ್ಥಿ ಅವಿನಾಶ್ ಎಂಬ ವಿದ್ಯಾರ್ಥಿಗೆ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ, ಇದಕ್ಕಾಗಿ 25 ಲಕ್ಷ ನೀಡುವಂತೆ ಹೇಳಿದ್ದಾರೆ. ಅವಿನಾಶ್‌ನನ್ನು ಮೈಸೂರಿಗೆ ಕರೆಸಿಕೊಂಡು, 1 ಲಕ್ಷ ಮುಂಗಡವಾಗಿ ಪಡೆದಿದ್ದಾರೆ.
ಆರೋಪಿಗಳ ಬಗ್ಗೆ ಅನುಮಾನಗೊಂಡ ಅವಿನಾಶ್ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿಗೆ ತೆರಳಿ ಸೀಟು ಲಭ್ಯತೆ ಬಗ್ಗೆ ವಿಚಾರಿಸಿದ್ದಾರೆ. ಯಾವುದೇ ವ್ಯಕ್ತಿಗಳ ಮೂಲಕ ಸೀಟು ನೀಡುವುದಿಲ್ಲ ಎಂದು ಕಾಲೇಜಿನವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವಿನಾಶ್ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ಬಳಿಯಿದ್ದ 24.90 ಲಕ್ಷ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮನ್ಸೂರ್ ಅಹಮದ್ ಕೆ.ಆರ್. ಠಾಣೆಯ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ. ಈ ಇಬ್ಬರು ಆರೋಪಿಗಳು ಮತ್ತಷ್ಟು ವಿದ್ಯಾರ್ಥಿಗಳಿಗೆ ಸೀಟು ಕೊಡಿಸುವುದಾಗಿ ವಂಚಿಸರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಡಿಸಿಪಿ ಎ.ಎನ್. ರಾಜಣ್ಣ, ಎನ್.ಆರ್. ಉಪ ವಿಭಾಗ ಎಸಿಪಿ ಸಿ.ಡಿ. ಜಗದೀಶ್ ಮಾರ್ಗದರ್ಶನದಲ್ಲಿ ಎನ್.ಆರ್. ಠಾಣೆ ಇನ್ಸ್‌ಪೆಕ್ಟರ್ ಡಿ. ಧನಂಜಯ, ಎಸ್‌ಐಗಳಾದ ಮುಸ್ತಾಕ್ ಪಾಷ, ಪರಶುರಾಮ್ ಮತ್ತು ಸಿಬ್ಬಂದಿ ಲಿಂಗರಾಜಪ್ಪ, ರಮೇಶ್, ಸುರೇಶ್, ಇಲಿಯಾಜ್ ಆರೋಪಿಗಳನ್ನು ಬಂಧಿಸಿದ್ದಾರೆ.