ಸ್ಪ್ಲೆಂಡಿಡ್ ಕೂರ್ಗ್ ಹೋಂಸ್ಟೇ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 22
ಸೇಫ್ ವ್ಹೀಲ್ ಕಂಪನಿಯ ಸ್ಥಾಪಿಸಿರುವ ಸ್ಪ್ಲೆಂಡಿಡ್ ಕೂರ್ಗ್ ಎಂಬ ಹೋಂಸ್ಟೇ ಸಂಸ್ಥೆಯನ್ನು ನಟಿ ನಿಧಿ ಸುಬ್ಬಯ್ಯ ಅವರು ವಿಂಡಫ್ಲವರ್ ರೆಸಾರ್ಟ್ನಲ್ಲಿ ಶನಿವಾರ ಉದ್ಘಾಟಿಸಿದರು.
ಪ್ರವಾಸಿಗರು ಹಾಗೂ ಪ್ರವಾಸೋದ್ಯಮ ಬೆಸೆಯುವ ಕೊಂಡಿಯಾಗಿ ಈ ಸ್ಪ್ಲೆಂಡಿಡ್ ಕೂರ್ಗ್ ಸ್ಥಾಪಿಸಲಾಗಿದೆ.ನಗರ ಪ್ರದೇಶದ ಜಂಜಾಟದಿಂದ ದೂರವಾಗುವ ಬಯಸುವವರಿಗೆ ಸ್ಮರಣೀಯ ಅನುಭವ ನೀಡುವುದೇ ಈ ಸಂಸ್ಥೆಯ ಗುರಿ ಎಂದು ಸೇಫ್ ವ್ಹೀಲ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಪ್ರಶಾಂತ್ ಹೇಳಿದರು.
ಇದಕ್ಕಾಗಿ ಕೊಡಗಿನಲ್ಲಿ 20 ಹೋಂ ಸ್ಟೇಗಳನ್ನು ಆರಿಸಿ, ಅವುಗಳಲ್ಲಿ ಪ್ರವಾಸಿಗರು ಅವಿಸ್ಮರಣೀಯ ಅನುಭವ ಪಡೆಯುವಂತೆ ರೂಪಿಸಿದ್ದೇವೆ. ಸಂಸ್ಥೆಯಲ್ಲಿ ಹೋಂಸ್ಟೇಗಾಗಿ ಕಾದಿರಿಸಿದ ಕ್ಷಣದಿಂದ ನಮ್ಮ ಉತ್ಕೃಷ್ಟ ಸೇವೆ ಅನುಭವ ಆರಂಭವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಸೇಫ್ ವ್ಹೀಲ್ನ ನೌಕರರಾದ ರಾಜೇಶ್ ಶಂಕರ್, ವಿಶಾಲ್, ಹೇಮಲತಾ, ಅಬು ತಾಲಿಬ್ ಅವರಿಗೆ ಉತ್ತಮ ನೌಕರರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಷೇರುದಾರರಿಗೆ ಶೇ.12 ರಷ್ಟು ಡಿವಿಡೆಂಡ್
ಕೆ.ಆರ್. ನಗರ: ಕಳೆದ ಮೂರು ವರ್ಷದಲ್ಲಿ ಸಂಘವು 5 ಲಕ್ಷ ನಿವ್ವಳ ಲಾಭಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಲಾ ಷೇರುದಾರ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉದಯರವಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಜಿ. ಡಿಂಡಿಮಶಂಕರ್ ಹೇಳಿದರು.
ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿನ ಒಕ್ಕಲಿಗರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಷೇರುದಾರ ಸದಸ್ಯರಿಗೆ ಸಾಲ ವಿತರಿಸುವ ಯೋಜನೆ ಜಾರಿಗೆ ತರಲು ಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಡಿಮೆ ಬೆಲೆಯಲ್ಲಿ ಸದಸ್ಯರಿಗೆ ನಿವೇಶನ ಒದಗಿಸಿ ಸಂಘಕ್ಕೆ ಲಾಭವಾಗುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿರುವ ನೌಕರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ನೌಕರರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ವಿತರಿಸುವ ಉದ್ದೇಶದಿಂದ ಈ ಸಂಘ ಸ್ಥಾಪನೆ ಮಾಡಲಾಗಿದ್ದು, ಈಗಾಗಲೆ ಸಂಘದ ವತಿಯಿಂದ ಹಲವು ಸದಸ್ಯರಿಗೆ ನಿವೇಶನ ವಿತರಿಸಲಾಗಿದೆ. ನಿವೇಶನ ಖರೀದಿಸಿರುವ ಸದಸ್ಯರು ಕೂಡಲೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಎಂ.ನಾರಾಯಣ್, ನಿರ್ದೇಶಕರಾದ ಎಂ.ಡಿ. ಮೂರ್ತಿ, ಎಂ. ನಾಗೇಶ್, ಸಿ.ಎನ್. ಪ್ರಭು, ವೆಂಕಟರಮಣಸ್ವಾಮಿ, ವ್ಯವಸ್ಥಾಪಕಿ ಇ.ಪುಷ್ಪಲತಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ್ ಇದ್ದರು.