ತಿಂಗಳಿಗೊಮ್ಮೆ ಕುಂದುಕೊರತೆ ವಿಚಾರಣೆ
ಕ.ಪ್ರ.ವಾರ್ತೆ ಭೇರ್ಯ ಸೆ. 23
ಜಿಲ್ಲಾದ್ಯಂತ ತಾಪಂ ವ್ಯಾಪ್ತಿಗೆ ತಿಂಗಳಿಗೊಮ್ಮೆ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಲು ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವು ಹೇಳಿದರು. ಜಿಪಂ ಸದಸ್ಯೆ ಪುಷ್ಪಲತಾ ಅವರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಅರ್ಜಿ ಸ್ವೀಕರಿಸಿದ ನಂತರ ಕಾರ್ಯಕರ್ತರೊಂದಿಗೆ ಮಾತನಾಡಿ, ಗ್ರಾಮದಲ್ಲಿ ಅಭಿವೃದ್ಧಿಯಾಗಬೇಕಾದ ಯೋಜನಾ ಪಟ್ಟಿಯನ್ನು ತಲುಪಿಸುವಂತೆ ತಿಳಿಸಿದರು.
ತಾಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಸಿ.ಪಿ. ರಮೇಶ್ ಮತ್ತು ಕಾರ್ಯಕರ್ತರು ಸನ್ಮಾನಿಸಿದರು. ನಂತರ ಮುಸ್ಲಿಂ ಮುಖಂಡ ಜಮೀರ್ ಅಹಮದ್ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮೋಹನ್ಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷ ಸ್ವಾಮಿ, ಗ್ರಾಪಂ ಸದಸ್ಯರಾದ ಕೃಷ್ಣೇಗೌಡ, ರಾಜಪ್ಪಾಜಿ, ಅಹಿಂದ ಮುಖಂಡ ಕಾಳೇಗೌಡ, ಶಕೀಲ್ಬೇಗ್, ಶುಭಕರ, ಖಾಲಿದ್, ಉದ್ಯಮಿ ಸುರೇಶ್ಬಾಬು, ಬಿ.ಎಂ. ಪ್ರಕಾಶ್, ಪ್ರಕಾಶನಾಯಕ ಇದ್ದರು.
ಸಹಕಾರ ಸಂಘಗಳಿಗೆ ನಷ್ಟ
ನಂಜನಗೂಡು: ಸರ್ಕಾರದ ಹಸ್ತಕ್ಷೇಪದಿಂದಾಗಿ ಸಹಕಾರ ಸಂಘಗಳು ನಷ್ಟದ ಹಾದಿ ಹಿಡಿದಿವೆ ಎಂದು ಇಲ್ಲಿನ ಶ್ರೀಕಂಠೇಶ್ವರ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಎಚ್.ವಿ. ಚನ್ನಪ್ಪ ಆರೋಪಿಸಿದರು. ಭಾರತೀ ತೀರ್ಥ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ಯಾಂಕ್ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಿಯವರೆಗೆ ಸರ್ಕಾರದ ಹಸ್ತಕ್ಷೇಪ ಇರುವುದೋ ಅಲ್ಲಿಯವರೆಗೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ರೈತರು ಮತ್ತು ಸಹಕಾರ ಸಂಘಗಳ ನಡುವೆ ಸರ್ಕಾರ ತೋರುತ್ತಿರುವ ದ್ವಂದ್ವ ನೀತಿಯಿಂದ ವಸೂಲಾತಿಗೆ ಭಾರಿ ಹೊಡೆತ ಬಿದ್ದಿದೆ. ಸಾಲ ಪಡೆದಿರುವವರು ನಿಗದಿತ ಸಮಯದೊಳಗೆ ಮರು ಪಾವತಿಸಿದರೆ, ಬ್ಯಾಂಕ್ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೊತೆಗೆ ರೈತರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವ್ಯವಸ್ಥಾಪಕ ಸಿ.ಎಸ್. ಮಹದೇವಸ್ವಾಮಿ, ಕಿರಿಯ ಕ್ಷೇತ್ರಾಧಿಕಾರಿಗಳಾದ ಬಸವಣ್ಣ, ಪಿ. ಮಮತಾ, ಪ್ರಭಾಕರ್, ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ಎಚ್.ಎಂ. ಶಿವಪ್ಪ, ನಿರ್ದೇಶಕರಾದ ಶ್ರೀಕಂಠ ಜೋಯಿಸ್ ಇದ್ದರು.