'ಪ್ರವಾಸೋದ್ಯಮ ಬೃಹತ್ ಕೈಗಾರಿಕೆ'
ಕ.ಪ್ರ.ವಾರ್ತೆ ಮೈಸೂರು ಸೆ. 23
ವಿಶ್ವದಲ್ಲಿಯೇ ಪ್ರವಾಸೋದ್ಯಮ ಬೃಹತ್ ಕೈಗಾರಿಕೆಯಾಗಿ ಬೆಳೆದಿದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಪ್ರವಾಸೋದ್ಯಮ ಇಲಾಖೆಯು ಸೋಮವಾರ ಏರ್ಪಡಿಸಿದ್ದ ಹೊಟೇಲ್ ಮಯೂರ ಹೊಸ ಹೆಚ್ಚುವರಿ ಪ್ರವಾಸಿ ಸೌಲಭ್ಯ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೈಸೂರು ವಿಭಾಗೀಯ ಉಪನಿರ್ದೇಶಕರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದ ಅನೇಕ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಕೈಗಾರಿಕೆಯಾಗಿ ಅಭಿವೃದ್ಧಿಯಾಗಿದೆ. ಅದರಲ್ಲೂ ಯುರೋಪ್ ದೇಶಗಳಲ್ಲಿ ಪ್ರವಾಸೋದ್ಯಮದ ಆದಾಯದ ಮೇಲೆ ಅಲ್ಲಿನ ಜನರ ಬದುಕು ನಡೆದಿದೆ. ಆದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ ಎಂದರು.
ಮೈಸೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಪ್ರವಾಸ ತಾಣಗಳಿವೆ. ಇವುಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಕೊರತೆಯಿದ್ದರೆ ಯಾವುದೇ ತಾಣ ಅಭಿವೃದ್ಧಿಯಾಗಲಾರದು. ಪ್ರವಾಸೋದ್ಯದಿಂದ ಯುವಕರಿಗೆ ಉದ್ಯೋಗ ಅವಕಾಶ ಹಾಗೂ ಸರ್ಕಾರಕ್ಕೆ ಆದಾಯ ಬರಲಿದೆ. ಆದ್ದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ನೂತನ ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸಹಾಯಧನ: ಈಗಾಗಲೇ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಯುವಕರಿಗೆ ವಾಹನ ಖರೀದಿಗೆ 2 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಅಂತೆಯೇ 2 ಸಾವಿರ ಅಲ್ಪಸಂಖ್ಯಾತ ಯುವಕರು ಟ್ಯಾಕ್ಸಿ ಕೊಳ್ಳಲು ತಲಾ 2 ಲಕ್ಷ ಸಹಾಯಧನ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಾಸು, ಮೈಸೂರು ಅನೇಕ ಪ್ರವಾಸಿ ತಾಣ ಹೊಂದಿದ್ದರೂ, ಒಂದೇ ದಿನ ಮಾತ್ರ ಪ್ರವಾಸಿಗರು ಇಲ್ಲಿ ಉಳಿಯುವಂತಾಗಿದೆ. ಆದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಉಳಿದುಕೊಳ್ಳುವಂತೆ ಆಕರ್ಷಣೀಯ ತಾಣಗಳ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಸಂದೇಶ್ ನಾಗರಾಜ್, ಆರ್.ಧರ್ಮಸೇನ, ಜಿ.ಪಂ. ಅಧ್ಯಕ್ಷ ಮಹದೇವು, ಕಾಂಗ್ರೆಸ್ ಮುಖಂಡ ವಿ. ರಾಮುಸ್ವಾಮಿ ಇದ್ದರು.