ಮಂಡ್ಯ ಕೈ ಸಮಾವೇಶಕ್ಕೆ ಕಾರ್ಯಕರ್ತರು
ಮೈಸೂರು: ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಪಕ್ಷ ಗೆಲವು ಸಾಧಿಸಿದ್ದರಿಂದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಸೆ.30 ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಆರ್.ಧರ್ಮಸೇನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಮಂಡ್ಯ ಸಮಾವೇಶಕ್ಕೆ ಮೈಸೂರಿನಿಂದ ಹೋಗಲು ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ ಮಾಡುವುದು. ಮುಂಬರುವ ಲೋಕಸಭೆಯಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿ ಪರ ಸಂಘಟನಾತ್ಮಕವಾಗಿ ಕೆಲಸ ಮಾಡುವ ಬಗೆಗೆ ಚರ್ಚಿಸಲಾಯಿತು. ಜಿಪಂ ಮಾಜಿ ಸದಸ್ಯೆ ಶಶಿರೇಖಾ ಮಾತನಾಡಿ, ನಿಗಮ- ಮಂಡಳಿ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮಾಜಿ ಮೇಯರ್ ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು, ಜಿಲ್ಲಾ ಮುಖಂಡರಾದ ಹುಣಸೂರು ಬಸವಣ್ಣ, ಉಮಾಶಂಕರ್, ಬಾಲಯ್ಯ, ಬಸವರಾಜು, ರಮೇಶ್, ರಾಜಶೇಖರ್, ತಮ್ಮಣ್ಣೇಗೌಡ ಇದ್ದರು.
ಗೃಹಿಣಿ ಆತ್ಮಹತ್ಯೆ
ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದ ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಜೆ.ಪಿ. ನಗರ 2ನೇ ಹಂತ ನಿವಾಸಿ ಹಾಗೂ ಎಚ್‌ಪಿಸಿಎಲ್ ಸಹಾಯಕ ವ್ಯವಸ್ಥಾಪಕ ಹರೀಶ್ ಎಂಬವರ ಪತ್ನಿ ಕೋಮಲ (33) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ವಿವಾಹವಾಗಿ 13 ವರ್ಷಗಳಾಗಿದ್ದು, ಇಬ್ಬರು ಗಂಡು ಮಕ್ಕಳು ಇದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಕೆ.ಆರ್. ನಗರ ರೈಲು ನಿಲ್ದಾಣದ ಫ್ಲಾಟ್ ಫಾರಂ-2 ರಲ್ಲಿ 70 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಚಹರೆ- 5 ಅಡಿ ಎತ್ತರ, ಕೃಶವಾದ ಶರೀರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಬೊಕ್ಕ ತಲೆ, ಕುರುಚಲು ಗಡ್ಡ ಮೀಸೆ ಇದೆ. ವಾರಸುದಾರರು ಇದ್ದಲ್ಲಿ ದೂ.0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಪೈಂಟರ್ ಬಿದ್ದು ಕಾಲು ಮುರಿತ
ಮೈಸೂರು: ದಸರಾ ಸಂಬಂಧಿಸಿದ ನಾಮಫಲಕಗಳಿಗೆ ಬಣ್ಣ ಬಳಿಯುತ್ತಿದ್ದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಸೋಮವಾರ ನಡೆದಿದೆ. ಗೌಸಿಯಾನಗರ ನಿವಾಸಿ ತನ್ವೀರ್ (31) ಗಾಯಗೊಂಡವರು. ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.