ಮಾವುತರ ಆರೋಗ್ಯ ಸರಿಯಿದ್ದರೆ ದಸರಾ ಯಶಸ್ವಿ: ಸಚಿವ ಖಾದರ್
ಕ.ಪ್ರ.ವಾರ್ತೆ ಮೈಸೂರು ಸೆ. 23
ಮಾವುತರ ಹಾಗೂ ಕಾವಾಡಿಗಳ ಆರೋಗ್ಯ ಸರಿ ಇದ್ದರೆ ಮಾತ್ರ ದಸರಾ ಯಶಸ್ವಿಯಾಗಲು ಸಾಧ್ಯ ಎಂದು ಆರೋಗ್ಯ ಸಚಿವರ ಯು.ಟಿ. ಖಾದರ್ ಹೇಳಿದರು.
ಅರಮನೆ ಆವರಣದಲ್ಲಿರುವ ಆನೆ ಶಿಬಿರದ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗಾಗಿ ಆಯುಷ್ ಇಲಾಖೆ ವತಿಯಿಂದ ಸೋಮವಾರದಿಂದ ದಸರಾ ಮುಗಿಯುವ ತನಕ ಆರಂಭಿಸಿರುವ ಆಯುಷ್ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿಖ್ಯಾತ ದಸರಾ ಮಹೋತ್ಸವ ಮುಖ್ಯ ಆಕರ್ಷಣೆ ಅಂಬಾರಿ. ಇದನ್ನು ಹೊರುವ ಆನೆ ಪಳಗಿಸಿ ಅವು ನಗರ ಪರಿಸರಕ್ಕೆ ಹೊಂದಿಕೊಳ್ಳುವಂತೆ ತಯಾರುಗೊಳಿಸುವುದು ಮಾವುತರು ಹಾಗೂ ಕಾವಾಡಿಗರು. ಆದ್ದರಿಂದ ಅವರಿಗೆ ಉತ್ತಮ ಆಯುರ್ವೇದ ಚಿಕಿತ್ಸೆಗಾಗಿ ಅರಮನೆ ಆವರಣದಲ್ಲಿ ಆಯುಷ್ ಚಿಕಿತ್ಸಾ ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ಮಾವುತರ ಆರೋಗ್ಯ ಸುಧಾರಿಸಲಿದೆ ಎಂದು ತಿಳಿಸಿದರು.
ಭಾರತದ ಪ್ರಾಚೀನ ಪರಂಪರೆಯ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗೆ ಹೊರದೇಶಗಳಿಂದ ಹೆಚ್ಚಿನ ಬೇಡಿಕೆ ಇದ್ದು, ಜರ್ಮನಿ ದೇಶವು ಸರ್ಕಾರದೊಂದಿಗೆ ಆಯುರ್ವೇದ ವೈದ್ಯರನ್ನು ಜರ್ಮನಿಗೆ ಕಳುಹಿಸಲು ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಆಯುಷ್ ಚಿಕಿತ್ಸೆ ಕುರಿತು ಇನ್ನು ಹೆಚ್ಚಿನ ಸಂಶೋಧನೆಗಾಗಿ ಒಂದು ಬಿಲಿಯನ್ ಯುರೋಗಳನ್ನು ನೀಡಲು ಅದು ಉತ್ಸುಕವಾಗಿದೆ ಎಂದ ಸಚಿವರು, ಇನ್ನು ಮುಂದೆ ಆಯುರ್ವೇದ ವೈದ್ಯರಿಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.
ಯೋಗ ದಸರಾ ಅಧ್ಯಕ್ಷ ಭಾಸ್ಕರ್, ಉಪಾಧ್ಯಕ್ಷ ರವಿಕುಮಾರ್, ಆಯುಷ್ ಇಲಾಖೆಯ ಡಾ. ನಾಗೇಶ್, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಇದ್ದರು.
ಈ ಆಸ್ಪತ್ರೆಯು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಆಯುರ್ವೇದ ಪಂಚಕರ್ಮ ಸೇರಿದಂತೆ ಎಲ್ಲ ಚಿಕಿತ್ಸೆ ಕ್ರಮಗಳನ್ನು ಮಾವುತರು, ಕಾವಾಡಿಗಳು ಹಾಗೂ ಕುಟುಂಬದವರಿಗೆ ನೀಡಲಾಗುವುದು ಎಂದು ಡಾ.ವೇದಾ ತಿಳಿಸಿದರು. ಅಲ್ಲದೆ ಮಾವುತರು ಇಲ್ಲಿಂದ ತೆರಳಿದ ನಂತರ ಕಾಡಿನಲ್ಲಿ ತಮ್ಮ ಪರಿಸರದಲ್ಲಿ ದೊರಕುವ ಗಿಡ, ಸೊಪ್ಪು ಮುಂತಾದವುಗಳನ್ನು ಚಿಕಿತ್ಸಾ ರೂಪದಲ್ಲಿ ಬಳಸುವ ಕುರಿತು ಮಾಹಿತಿ, ಅರಿವು ನೀಡಲಾಗುವುದೆಂದು ಹೇಳಿದರು.