ವರ್ಗಾವಣೆಯಿಂದ ಅನ್ಯಾಯ, ನಿವೃತ್ತಿ ನಂತರ ರಾಜಕೀಯಕ್ಕೆ
ಕ.ಪ್ರ.ವಾರ್ತೆ ನಂಜನಗೂಡು ಸೆ. 23
ವರ್ಗಾವಣೆಯಿಂದ ಅನ್ಯಾಯವಾಗಿದೆ. ನಿವೃತ್ತಿ ನಂತರ ರಾಜಕೀಯ ಸೇರಿ ನಿವೃತ್ತಿ ಅಂಚಿನಲ್ಲಿದ್ದ ನನ್ನ ವರ್ಗಾವಣೆ ಹಿಂದಿನ ಸತ್ಯವನ್ನು ಬಿಚ್ಚಿಡುವೆ...
ಹೀಗೆಂದು ಅವಾಜ್ ಹಾಕಿದವರು ನಂಜನಗೂಡು ಉಪ ವಿಭಾಗದ ಡಿವೈಎಸ್ಪಿಯಾಗಿ ಇತ್ತೀಚೆಗಷ್ಟೆ ವರ್ಗಾವಣೆಗೊಂಡ ಎಸ್.ಜೆ. ವಿಜಯಕುಮಾರ್.
ಪೊಲೀಸ್ ಭವನದಲ್ಲಿ ಇಲಾಖಾ ಸಿಬ್ಬಂದಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 35 ವರ್ಷ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಗೆ ಇನ್ನು ಕೇವಲ ಎರಡು ತಿಂಗಳಿದೆ ಎನ್ನುವಾಗ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಯಿತು. ಮನಸ್ಸಿಗೆ ಬೇಸರವಾಗಿದೆ. ನಿವೃತ್ತಿಯಾದ ನಂತರ ನನ್ನ ವರ್ಗಾವಣೆ ಹಿಂದಿರುವ ವಿಚಾರವನ್ನು ಎಳೆ ಎಳೆಯಾಗಿ ವೇದಿಕೆಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದ ನಿರ್ಗಮಿತ ಡಿವೈಎಸ್ಪಿ, ನಿವೃತ್ತಿಯ ನಂತರ ರಾಜಕೀಯ ಪ್ರವೇಶ ಮಾಡುವುದಾಗಿಯೂ ಸೂಚನೆ ನೀಡಿದರು.
ನನ್ನ ಕರ್ತವ್ಯ ನಿಷ್ಠೆಗೆ ರಾಷ್ಟ್ರಪತಿ ಪದಕ ಹಾಗೂ ರಾಜ್ಯ ಪ್ರಶಸ್ತಿಗಳು ದೊರಕಿವೆ. ಕಾರಣರಾದ ಸಿಬ್ಬಂದಿ ಮತ್ತು ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಎಎಸ್ಪಿ ಆರ್.ಬಿ. ಮೋಹನ್ ರೆಡ್ಡಿ, ಪ್ರಭಾರ ಡಿವೈಎಸ್‌ಪಿ ಆನಂದ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಎಸ್. ರಘು, ಸುಂದರ್ ರಾಜು, ಎಸ್‌ಐಗಳಾದ ಮಹೇಶ್, ರವಿಶಂಕರ್, ನಟರಾಜು, ಸಂತೋಷ್ ಕಶ್ಯಪ್, ಡಾ. ಪ್ರಹ್ಲಾದ್ ವೈದ್ಯ, ಜುಬಿಲಿಯಂಟ್ ಕಾರ್ಖಾನೆಯ ವರ್ಮ ಇದ್ದರು.