ಹೊರಗುತ್ತಿಗೆ ಪದ್ಧತಿ ರದ್ದಾಗಬೇಕು: ಮಾನ್ಪಡೆ
ಕ.ಪ್ರ.ವಾರ್ತೆ ಹುಣಸೂರು ಸೆ. 23
ಸರ್ಕಾರ ಹಣ ಉಳಿಸುವ ನೆಪದಲ್ಲಿ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಪ್ರವೃತ್ತಿ ತೊಲಗಬೇಕು. ಕಾರ್ಮಿಕರು, ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಗ್ರಾಪಂ ನೌಕಕರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಸಿಐಟಿಯು ನೇತೃತ್ವದಲ್ಲಿ ಆಯೋಜಿಸಿದ್ದ 2ನೇ ಮೈಸೂರು ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಪಂಗಳಲ್ಲಿ ಸಂಪನ್ಮೂಲ ಕೊರತೆ ಸಾಕಷ್ಟಿದ್ದು, ನೌಕರರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ.
ಕನಿಷ್ಠ ವೇತನ, ಪಿಂಚಣಿ ಸೌಲಭ್ಯ, ಹೆರಿಗೆ ರಜೆ ನೀಡಬೇಕು. ಬಿಲ್ ಕಲೆಕ್ಟರ್ಗೆ ಕನಿಷ್ಠ 12 ಸಾವಿರ, ನೀರು ಬಿಡುವವರಿಗೆ 10 ಸಾವಿರ ಹಾಗೂ ಪೌರ ಕಾರ್ಮಿಕರಿಗೆ ಉತ್ತಮ ಸಂಬಳ ನೀಡಲು ಸಹಕಾರಿ ಆಗುವಂತೆ ಗ್ರಾಪಂಗೆ 3ನೇ ಹಣಕಾಸು ಯೋಜನೆಯಲ್ಲಿ ಕನಿಷ್ಠ 25 ಲಕ್ಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ 5 ಲಕ್ಷ ಹುದ್ದೆ ಖಾಲಿ ಇದೆ. ಕಾರ್ಮಿಕರ ಹಕ್ಕು ಕುಸಿಯುವ ಎಸ್ಮಾ ಜಾರಿ ತರುತ್ತೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೂ, ಹಿಂದಿನ ಬಿಜೆಪಿ ಸರ್ಕಾರಕ್ಕೂ ಯಾವುದೆ ವ್ಯತ್ಯಾಸ ಇಲ್ಲ ಎಂದರು. 2012-13ನೇ ಸಾಲಿನಲ್ಲಿ ಶ್ರೀಮಂತ ಉದ್ದಿಮೆದಾರರ ಕೋಟ್ಯಂತರ ರು. ತೆರಿಗೆ ಮನ್ನಾ ಮಾಡಿರುವ ಸರ್ಕಾರ ಕಾರ್ಮಿಕರು, ನೌಕರರಿಗೆ ಕನಿಷ್ಠ ವೇತನ ನೀಡಲು ಮೀನಮೇಷ ಎಣಿಸುತ್ತಿದೆ. ಆದರೆ ಸಂಸದರು, ಶಾಸಕರು ತಮ್ಮ ಸಂಬಳವನ್ನು 300 ಪಟ್ಟು ಹೆಚ್ಚಿಸಿಕೊಂಡಿರುವುದು ನಾಚಿಕೆಗೇಡು ಎಂದರು.
ಮೋದಿ- ಗಾಂಧಿ ಚರ್ಚೆ: ದೇಶದಲ್ಲಿ ಮೋದಿ-ರಾಹುಲ್ ಗಾಂಧಿ ಚರ್ಚೆ ನಡೆದಿದೆ. ಮೋದಿ ಹಿಂದುತ್ವ ಎಂದರೆ. ರಾಹುಲ್ ಗಾಂಧಿ ಸೌಮ್ಯ ಹಿಂದುತ್ವ ಎನ್ನುವ ಆಲೋಚನೆ ಇದ್ದರೆ, ಇಬ್ಬರದು ಜನ ವಿರೋಧಿಯ ಆರ್ಥಿಕ ನೀತಿ ಮಾತ್ರ ಒಂದೆ ಆಗಿದೆ. ಇಬ್ಬರೂ ಒಂದೆ ನಾಣ್ಯದ ಎರಡು ಮುಖಗಳಂತೆ ಎಂದು ಟೀಕಿಸಿದರು.
ಗ್ರಾಪಂ ನೌಕರರ ರಾಜ್ಯ ಸಮ್ಮೇಳನ ಅ.19, 20 ಮತ್ತು 21ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಸಮ್ಮೆಳನಕ್ಕೆ ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷ ವಾಸುದೇವಾಚಾರ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಭಾಗವಹಿಸಲಿದ್ದು, ಅಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದದಲ್ಲಿ ಮುಂದಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ವಾರಕಾಲ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್, ಗ್ರಾಪಂ ನೌಕರರ ಜಿಲ್ಲಾಧ್ಯಕ್ಷ ಕೆ. ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಡಗೌಡ, ಜಿಲ್ಲಾ ಕಾರ್ಯದರ್ಶಿ ವಿ. ಬಸವರಾಜು ಕಲ್ಕುಣಿಕೆ, ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರಾದ ಲೋಕೇಶ್, ಜವರೇಗೌಡ, ಕರೀಗೌಡ, ಪುಟ್ಟಸ್ವಾಮಪ್ಪ, ಚಂದ್ರು ಮಾತನಾಡಿದರು. ಎಲ್ಲಾ ತಾಲೂಕುಗಳಿಂದ ನೌಕರರು ಆಗಮಿಸಿದ್ದರು.