ಪ್ರತ್ಯೇಕ ಪ್ರಕರಣ; ಮೂವರು ಆತ್ಮಹತ್ಯೆ
ಕ.ಪ್ರ.ವಾರ್ತೆ ಮೈಸೂರು ಸೆ. 24
ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸಾಲ ವಾಪಸ್ ನೀಡದ ಕಾರಣಕ್ಕೆ ಆಟೋ ವಶಪಡಿಸಿಕೊಂಡಿದ್ದರಿಂದ ಮನನೊಂದ ಆಟೋ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉದಯಗಿರಿ ಬೀಡಿ ಕಾಲೋನಿ ನಿವಾಸಿ ಹಾಗೂ ಆಟೋ ಚಾಲಕ ಸಮಿವುಲ್ಲಾ (48) ಆತ್ಮಹತ್ಯೆ ಮಾಡಿಕೊಂಡವರು. ಇವರು ನಜರ್ಬಾದ್ನ ಪ್ರಕಾಶ್ ಎಂಬವರ ಬಳಿ ಸಾಲ ಪಡೆದಿದ್ದರು. ಆದರೆ, ಸಂಪೂರ್ಣ ಹಣ ವಾಪಸ್ ನೀಡದ ಕಾರಣ ಪ್ರಕಾಶ್ ಆಟೋವನ್ನು ವಶಪಡಿಸಿಕೊಂಡಿದ್ದರು.
ಸಾಲದ ಹಣ ಸಂಪೂರ್ಣ ವಾಪಸ್ ನೀಡಿದರೆ ಮಾತ್ರ ಆಟೋ ನೀಡುವುದಾಗಿ ಹೇಳಿದ್ದರು. ಇದರಿಂದ ಮನನೊಂದ ಸಮಿವುಲ್ಲಾ ಮಂಡಿ ಠಾಣೆ ಎದುರು ಆಟೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ವಿಷ ಸೇವಿಸಿ ಅಸ್ವಸ್ಥಗೊಂಡಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈ ನಡುವೆ ಮೃತರ ಸಂಬಂಧಿಕರು 5 ಲಕ್ಷ ಪರಿಹಾರ ಹಾಗೂ ಆಟೋವನ್ನು ವಾಪಸ್ ನೀಡುವಂತೆ ಪ್ರಕಾಶ್ ಅವರನ್ನು ಒತ್ತಾಯಿಸಿದ್ದಾರೆ.
ನರ್ಸ್ ಆತ್ಮಹತ್ಯೆ: ಕೆ.ಆರ್. ಮೊಹಲ್ಲಾ ರಾಮಾನುಜ ರಸ್ತೆ ನಿವಾಸಿ ಗುರುಮೂರ್ತಿ ಎಂಬವರ ಪತ್ನಿ ಸುಮಲತಾ (36) ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ವ್ಯಾಪಾರಿ ನೇಣಿಗೆ ಶರಣು: ನಂಜುಮಳಿಗೆ ಬಳಿಯ ಮೇದರ್ ಕೇರಿ ನಿವಾಸಿ ರಂಗನಾಯಕ ಎಂಬವರ ಪುತ್ರ ಬಸವಣ್ಣನಾಯಕ (50) ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಇವರು ಪಪ್ಪಾಯಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟು ಜೆಎಲ್ಬಿ ರಸ್ತೆಯಲ್ಲಿರುವ ಸಿಕೆಸಿ ಕಾನ್ವೆಂಟ್ ಆವರಣದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ವಿಜಯನಗರದ ವಿದ್ಯುತ್ 66/11 ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆ.ವಿ ವಿದ್ಯುತ್ ಮಾರ್ಗದಲ್ಲಿ ಸೆ.26 ರಂದು ತುರ್ತು ಕೆಲಸ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ನ ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳ ವಿವರ- ಗೋಕುಲಂ 1 ರಿಂದ 3ನೇ ಹಂತ, ಮಹದೇಶ್ವರ ಬಡಾವಣೆ, ವಿಜಯನಗರ 1 ರಿಂದ 3ನೇ ಹಂತ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಬಡಾವಣೆ, ಒಂಟಿಕೊಪ್ಪಲು, ಜಯಲಕ್ಷ್ಮೀಪುರಂ, ಪಡುವಾರಹಳ್ಳಿ, ಸಿಎಫ್ಟಿಆರ್ಐ, ಜಿಲ್ಲಾಧಿಕಾರಿಯವರ ಕ್ವಾಟರ್ಸ್, ನರ್ಸ್ ಕ್ವಾಟರ್ಸ್, ಇಎಸ್ಐ ಆಸ್ಪತ್ರೆ, ಆಕಾಶವಾಣಿ, ಹಸುಕರು ಪಾರ್ಕ್, ಕಾಳಿದಾಸ ರಸ್ತೆ, ಗೋಕುಲಂ ಪಾರ್ಕ್ ಮತ್ತು ಯಾದವಗಿರಿ ಕೈಗಾರಿಕಾ ಪ್ರದೇಶ.