ಫಾರ್ಮಾಸಿಸ್ಟ್ ದಿನಾಚರಣೆ ನಾಳೆ
ಮೈಸೂರು: ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯವು ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ ಸೆ.26ರ ಬೆಳಗ್ಗೆ 11ಕ್ಕೆ ಕಾಲೇಜಿನ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಿದೆ. ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೆ.ಆರ್. ಆಸ್ಪತ್ರೆಯ ಹಿರಿಯ ಫಾರ್ಮಾಸಿಸ್ಟ್ ಎಸ್.ಎಸ್. ದೇಶಪಾಂಡೆ ಭಾಗವಹಿಸಿ ಮಾತನಾಡುವರು. ಪ್ರಾಂಶುಪಾಲ ಡಾ.ಕೆ. ಜೋಷಿ ಹನುಮಂತಾಚಾರ್ ಅಧ್ಯಕ್ಷತೆ ವಹಿಸುವರು.
ವಿಚಾರ ಸಂಕಿರಣ
ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಸೆ.26ರ ಬೆಳಗ್ಗೆ 10ಕ್ಕೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯ ಯೋಜನೆಯ ಅನುಷ್ಠಾನ ಮತ್ತು ದಾಖಲೆಗಳ ಸರಳೀಕರಣದ ವಿಚಾರ ಸಂಕಿರಣ ನಡೆಯಲಿದೆ.
ಉಚಿತ ತಪಾಸಣೆ
ಲಕ್ಷ್ಮೀಪುರಂನ ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಸೆ.26 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. 4259259, ಮೊ. 7204059259 ಸಂಪರ್ಕಿಸಬಹುದು.
ಸಂಗೀತ ತರಬೇತಿ
ಗಾನರಶ್ಮಿ ಸಂಗೀತ ಸಂಸ್ಥೆ ವತಿಯಿಂದ ಸೆ.28 ರಿಂದ ಸಂಗೀತ ತರಬೇತಿ ಶಿಬಿರ ಆಯೋಜಿಸಿದೆ. ಮೊ. 9980344685 ಸಂಪರ್ಕಿಸಬಹುದು.
ಕಾರ್ಯಾಗಾರ
ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವೀಂಗ್ ವತಿಯಿಂದ ಸೆ.29 ರಿಂದ ಬೆಳಗ್ಗೆ 11 ರಿಂದ 1.30 ರವರೆಗೆ ವಿಜಯನಗರದಲ್ಲಿ ನಿಮ್ಮ ಮಕ್ಕಳನ್ನು ಅರಿತುಕೊಳ್ಳಿ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಆಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 8884253696 ಸಂಪರ್ಕಿಸಬಹುದು.
ಬಹುಮಾನ ವಿತರಣೆ
ಸರಸ್ವತಿಪುರಂ ಸಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮತ್ತು ರೋಟರಿ ಕ್ಲಬ್ (ಪಶ್ಚಿಮ) ವತಿಯಿಂದ ಸೆ.29ರ ಸಂಜೆ 6ಕ್ಕೆ ರೋಟರಿ ಕ್ಲಬ್ ಆವರಣದಲ್ಲಿ 19ನೇ ವರ್ಷದ ರಾಜ್ಯಮಟ್ಟದ ಕನ್ನಡ ಭಾವಗೀತೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಇಂದು ವರುಣದಲ್ಲಿ ಕೆಸರುಗದ್ದೆ ಓಟ
ಮೈಸೂರು: ಇಂದಿನಿಂದ ವರುಣ ಗ್ರಾಮದಲ್ಲಿ ಕೆಸರು ಗದ್ದೆ ಓಟದ ಮೂಲಕ ಗ್ರಾಮೀಣ ದಸರಾ ಕಾರ್ಯಕ್ರಮವು ಆರಂಭವಾಗಲಿದ್ದು, ಈ ಬಾರಿ ತಾಲೂಕಿನ ಜಯಪುರ ಹೋಬಳಿ ಉದ್ಬೂರು ಗ್ರಾಮದಲ್ಲಿ ತಾಲೂಕು ಗ್ರಾಮೀಣ ದಸರಾ ಆಯೋಜಿಸಿದೆ ಎಂದು ತಹಸೀಲ್ದಾರ್ ನವೀನ್ ಜೋಸೆಫ್ ಹೇಳಿದ್ದಾರೆ. ಸೆ.26 ರಂದು ಉದ್ಬೂರು ಗ್ರಾಮದ ಪ್ರೌಢಶಾಲಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಜರುಗಲಿದೆ. ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ಕುಸ್ತಿ ಮತ್ತು ಸೈಕಲ್ ರೇಸ್‌ಗಳನ್ನು ನಡೆಸಲಾಗುತ್ತದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಬಿಂದಿಗೆಯಲ್ಲಿ ನೀರು ಹೊತ್ತು ಓಡುವುದು ಮತ್ತು ಬುಟ್ಟಿಯಲ್ಲಿ ರಾಗಿ ತುಂಬಿ ಓಡುವ ಸ್ಪರ್ಧೆಗಳನ್ನು ಆಯೋಜಿಸಿದೆ. ಸ್ಪರ್ಧೆಗಳಲ್ಲಿ ವಿಜೇತರಾದ ಇಬ್ಬರನ್ನು ಜಿಲ್ಲಾ ಮಟ್ಟದ ರೈತ ದಸರಾಕ್ಕೆ ಕಳುಹಿಸಲಾಗುವುದು. ಸೆ.27 ರಂದು ಉದ್ಬೂರಿನಲ್ಲಿ ವೈಭವಯುತವಾದ ಜನಪರ ಕಲಾ ತಂಡಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿ ಉತ್ಸವ ಮಾಡಲಾಗುವುದು.
ಅರಸು ಕಾಲೇಜು ತಂಡ ಪ್ರಥಮ
ಹುಣಸೂರು: ಹುಣಸೂರಿನ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು, ಅಂತರ ವಲಯ ಮಟ್ಟಕ್ಕೆ ಆಯ್ಕೆಯಾಗಿದೆ.ಪಟ್ಟಣದ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ವಿವಿ ಕೃಷ್ಣರಾಜ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಚ್.ಡಿ. ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ಅಂತರದಿಂದ ಸೋಲಿಸಿ 2014ರ ಫೆಬ್ರವರಿಯಲ್ಲಿ ಮಂಡ್ಯದಲ್ಲಿ ನಡೆಯುವ ಅಂತರ ವಲಯ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಪ್ರಾಂಶುಪಾಲ ಪ್ರೊ.ಲೋಹಿತಾಶ್ವ, ಡಾ. ಗಣೇಶ್ ಬಹುಮಾನ ವಿತರಿಸಿದರು.
ಅನ್ನಭಾಗ್ಯ: 400 ಮೂಟೆ ಅಕ್ಕಿ ವಶ
ಮೈಸೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗೋದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿ, 400ಕ್ಕೂ ಹೆಚ್ಚಿನ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹೊರವಲಯದಲ್ಲಿರುವ ಬಂಡಿಪಾಳ್ಯ ಎಪಿಎಂಪಿ ಆವರಣದಲ್ಲಿರುವ ವೀರಭದ್ರೇಶ್ವರ ಎಂಟರ್‌ಪ್ರೈಸರ್ಸ್‌ನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು: ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಶ್ಯಾದನಹಳ್ಳಿ ನಿವಾಸಿ ತಮ್ಮೇಗೌಡ ಎಂಬವರ ಪುತ್ರ ಚಿಕ್ಕೇಗೌಡ (50) ಮೃತಪಟ್ಟವರು. ಇವರು ಆಸ್ಪತ್ರೆಗೆ ಹೋಗುವ ಸಲುವಾಗಿ ಬೈಕಿನಲ್ಲಿ ಮೈಸೂರಿಗೆ ಆಗಮಿಸಿದ್ದರು. ಬೈಕಿನಲ್ಲಿ ಹಿನಕಲ್‌ನಿಂದ ಬೋಗಾದಿ ಕಡೆಗೆ ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿಜಯನಗರ 4ನೇ ಹಂತದಿಂದ ವಿಜಯನಗರ 3ನೇ ಹಂತದ ಕಡೆಗೆ ಹೋಗುತ್ತಿದ್ದ ನಗರ ಸಾರಿಗೆ ಬಸ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆ ಎಸ್‌ಐ ಡಿ. ಯೋಗೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ನಾಪತ್ತೆ
ಮೈಸೂರು: ಎನ್.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಗೌಹರ್ ಜಾನ್ ಎಂಬವರ ಪುತ್ರಿ ಮುಜೀದಾ (18) ಫ್ಯಾಕ್ಟರಿ ಕೆಲಸಕ್ಕೆ ಸೆ.22 ರಂದು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 4 ಅಡಿ ಎತ್ತರ, ದೃಢವಾದ ಶರೀರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 2418312 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಕೊಲಂಬಿಯಾ ಏಷಿಯಾ ಆಸ್ಪತ್ರೆ ಹತ್ತಿರ ಭಿಕ್ಷೆ ಬೇಡಿಕೊಂಡಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.ಚಹರೆ- 55 ವರ್ಷ, 5.3 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈಬಣ್ಣ, ಕೋಲು ಮುಖ, ಮಾಸಲು ಕಪ್ಪು ಬಣ್ಣದ ಶರ್ಟ್, ಇಟ್ಟಿಗೆ ಕಲರ್ ನಿಕ್ಕರ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 2418312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.