ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಕೆ.ಆರ್. ನಗರ: ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೈಸಿಕಲ್, ಸಮವಸ್ತ್ರ ಮತ್ತು ಬಸ್ ಪಾಸ್‌ಗೆ ಹಣವನ್ನು ಉಚಿತವಾಗಿ ನೀಡುತ್ತಿದ್ದು, ಇದರ ಅನುಕೂಲತೆಯನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂದು ಪುನೀತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್. ಕಾಂತರಾಜು ಹೇಳಿದರು. ತಾಲೂಕಿನ ಹಂಪಾಪುರ ಗ್ರಾಮದ ಪುನೀತ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರಗತಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಒದಗಿಸಲು ಸಂಸ್ಥೆಯು ನಿರ್ಧರಿಸಿದ್ದು, ಪೋಷಕರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು. ಸಮಾಜ ಸೇವಕ ಮಧುವನಹಳ್ಳಿ ಬಡಾವಣೆಯ ಎಸ್.ವಿವೇಕಾನಂದ ಮಾತನಾಡಿದರು.
ಜೀಪ್ ಡಿಕ್ಕಿ: ಒಬ್ಬ ಸಾವು, ಐವರಿಗೆ ಗಾಯ
ಬೈಲುಕುಪ್ಪೆ: ಬಸ್‌ಗೆ ಹಿಂಬದಿಯಿಂದ ಬಂದ ಜೀಪ್ ಡಿಕ್ಕಿ ಹೊಡೆದ ಪರಿಣಾಮ, ಒಬ್ಬರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಬೈಲಕುಪ್ಪೆ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ. ಜೀಪ್‌ನಲ್ಲಿ ಕುಳಿತಿದ್ದ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಗ್ರಾಮದ ಕುಮಾರ್ ಎಂಬವರ ಪುತ್ರ ವಿಜಯ್ (45) ಮೃತಪಟ್ಟ ದುರ್ದೈವಿ. ಮೃತ ವಿಜಯ್ ಅವರ ಪತ್ನಿ ಸತ್ಯಭಾಮ, ಅಳಿಯ ಮಣಿಕಂಠ, ಸರೋಜಮ್ಮ, ಬಿಂದು, ಲಕ್ಷ್ಮಿ, ಎಂಬವರು ತಮ್ಮ ಜೀಪ್‌ನಲ್ಲಿ ಅವರ ಅಜ್ಜಿಯನ್ನು ಹೃದಯ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ ವಾಪಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬೈಲುಕುಪ್ಪೆ ಠಾಣೆ ಎದುರು ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುತ್ತಿರುವ ವೇಳೆ ಅದೆ ಮಾರ್ಗವಾಗಿ ಬರುತ್ತಿದ್ದ ಜೀಪ್ ಹಿಂಬದಿಯಿಂದ ಡಿಕ್ಕಿ ಹೊಡೆದಾಗ ಘಟನೆ ಸಂಭವಿಸಿದೆ. ವಿಜಯ್ ಪತ್ನಿ ಸತ್ಯಭಾಮ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.