ಸಹಕಾರ ಸಂಘಕ್ಕೆ 25.71 ಲಕ್ಷ ಲಾಭ
ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2012-13ನೇ ಸಾಲಿನಲ್ಲಿ 25.71 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಹಿರಿಯ ನಿರ್ದೇಶಕ ಹೆಮ್ಮಿಗೆ ಶ್ರೀನಿವಾಸ್ ಹೇಳಿದರು.
ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘ ಕಳೆದ ಸಾಲಿನಲ್ಲಿ ಒಟ್ಟು 67 ಕೋಟಿ ವ್ಯವಹಾರ ನಡೆಸಿದೆ. ಒಟ್ಟು 3.37 ಲಕ್ಷ ಷೇರು ಹಣ ಸಂಗ್ರಹಿಸಿ, ದಾಖಲೆ ನಿರ್ಮಿಸಿದೆ. ಕಳೆದ ವರ್ಷ 9 ಕೋಟಿ ಸಾಲ ವಿತರಿಸಿದ್ದು, ಈ ವರ್ಷ 15 ಕೋಟಿ ಸಾಲ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದರು. ಬ್ಯಾಂಕಿನ ಮೇಲ್ವಿಚಾರಕ ಶೇಖರ್ ಮಾತನಾಡಿದರು. ಸಂಘದ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಯತಿರಾಜೇಗೌಡ, ಸ್ವಾಮಿಗೌಡ, ಸುರೇಶ್, ತಮ್ಮೇಗೌಡ, ರಾಮಚಂದ್ರು, ಚಂದ್ರಶೇಖರ್, ಹೊನ್ನಗಿರಿಗೌಡ, ಗ್ರಾಪಂ ಉಪಾಧ್ಯಕ್ಷ ಚೆನ್ನಿಗರಾಯ, ದೊರೆಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಮಹೇಶ್, ಸಿಬ್ಬಂದಿ ಪದ್ಮನಾಭ್, ಸ್ವಾಮಿಗೌಡ, ಶಿವಕುಮಾರ್, ಆನಂದ್, ಗೋಪಾಲಕೃಷ್ಣ ಇದ್ದರು.
ನರ್ಮ್ ಕಾಮಗಾರಿ ವೀಕ್ಷಣೆ ರದ್ದು
ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಕಾರ್ಯಕ್ರಮ ರದ್ದುಗೊಂಡಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಬೆಳಗ್ಗೆ 10.30ಕ್ಕೆ ಸಚಿವರು ಕಾಮಗಾರಿ ಪರಿಶೀಲನೆಗೆ ಹೊರಡಬೇಕಿತ್ತು. ಆದರೆ, ಮಹಾರಾಣಿ ಕಾಲೇಜಿನಲ್ಲಿ ಸಭೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಕುರಿತ ಸಭೆ, ಕೆಎಸ್ಆರ್ಟಿಸಿ ವಿಜಯನಗರ ಬಸ್ ಘಟಕ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನರ್ಮ್ ಕಾಮಗಾರಿ ಪರಿಶೀಲನೆ ರದ್ದುಗೊಳಿಸಿದರು.