ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳ ಸಮೀಕ್ಷೆ
ಮೈಸೂರು: ಜಿಲ್ಲೆಯಲ್ಲಿರುವ 7 ತಾಲೂಕುಗಳಲ್ಲಿ ಈ ತನಕ ವಿವಿಧ ಇಲಾಖೆಗಳಿಂದ ಸರ್ಕಾರೇತರ ಸಂಸ್ಥೆಗಳಿಂದ (ಎನ್ಜಿಒ) ಬ್ಯಾಂಕ್ಗಳಿಂದ, ಪ್ರತಿ ಗ್ರಾಮದಲ್ಲಿ ರಚನೆಯಾಗಿರುವ ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳ ಸಮಗ್ರ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕ್ರೋಡೀಕರಿಸಲು ಮತ್ತು ಈ ಮಾಹಿತಿಯನ್ನು ಪಂಚತಂತ್ರಾಂಶದಲ್ಲಿ ಅಳವಡಿಸುವ ಸಲುವಾಗಿ ಸೆ.25 ರವರೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಮಾಹಿತಿಯನ್ನು ಎನ್ಆರ್ಎಲ್ಎಂ (ಸಂಜೀವಿನಿ ಯೋಜನೆ ಜಿಲ್ಲೆಯಲ್ಲಿ ರೂಪಿಸಲು) ಅನುಷ್ಠಾನಗೊಳಿಸುವ ಸಲುವಾಗಿ ಸಮೀಕ್ಷೆಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಗಳ ನೌಕರರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಿಂದ ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಗೆ ಎಲ್ಲ ಸ್ವಸಹಾಯ ಸಂಘದ ಸದಸ್ಯರು, ಸ್ತ್ರೀಶಕ್ತಿ ಸಂಘದ ಹಾಗೂ ಇತರೆ ಸ್ವಸಹಾಯ ಸಂಘದ ಸದಸ್ಯರು ತಮ್ಮ ಸಂಘದ ಸದಸ್ಯರ ಮಾಹಿತಿಯನ್ನು ತಪ್ಪದೆ ನೀಡಬೇಕೆಂದು ಮನವಿ ಮಾಡಿದೆ. ತಾಲೂಕು ಮಟ್ಟದಲ್ಲಿ ಸಮೀಕ್ಷೆ ಕಾರ್ಯನಿರ್ವಾಹಕ ಅಧಿಕಾರಿ, ತಾಪಂ ನೇತೃತ್ವದಲ್ಲಿ ಎನ್ಜಿಒ, ಸಿಡಿಪಿಒ, ಎಡಿ, ಇಲಾಖೆ ಉಸ್ತುವಾರಿ ವಹಿಸುವರು.
ಪರಿಶಿಷ್ಟರಿಂದ ವಿವಿಧಸೌಲಭ್ಯಕ್ಕೆ ಅರ್ಜಿ
ಬನ್ನೂರು: ಪುರಸಭೆ ವತಿಯಿಂದ ಪಟ್ಟಣದಲ್ಲಿ ವಾಸವಿರುವ ಪ.ಜಾತಿ, ಪಂಗಡಗಳ ಅರ್ಹ ಫಲಾನುಭವಿಗಳಿಗೆ 2013-14ನೇ ಸಾಲಿನ ಶೇ.22.75ರ ಎಸ್ಎಫ್ಸಿ ಮುಕ್ತನಿಧಿ ಮತ್ತು ಸಾಮಾನ್ಯ ನಿಧಿ ಅನುದಾನದಲ್ಲಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವಾಗ ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳ ನಕಲು ಪ್ರತಿಗಳು. ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರ ಮತ್ತು ಪ್ರಸಕ್ತ ಸಾಲಿನ ಆದಾಯ ಪ್ರಮಾಣಪತ್ರ, ನಿವೇಶನ ಅರ್ಜಿದಾರರ ಹೆಸರಿನಲ್ಲಿದ್ದು, ಪುರಸಭೆ ಕಾರ್ಯಾಲಯ ಆಸ್ತಿ ತೆರಿಗೆ ವಹಿಸಿದಲ್ಲಿ ದಾಖಲಿರುವ ನಮೂನೆ 24ರ ನಕಲು ಪ್ರತಿ, ಪಡಿತರ ಚೀಟಿ, ಆಧಾರ್, ಚುನಾವಣಾ ಗುರುತಿನ ಚೀಟಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ವ್ಯಾಸಂಗ ಮಾಡುತ್ತಿರುವ ವ್ಯಾಸಂಗ ದೃಢೀಕರಣ ಪತ್ರದ ಮೂಲಪ್ರತಿ, ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ನಕಲು, ಕಳೆದ ಸಾಲಿನ ಅಂಕಪಟ್ಟಿ ನಕಲು, ಪಡಿತರ ಚೀಟಿ, ಆಧಾರ್ ನಕಲು, ಚುನಾವಣಾ ಗುರುತಿನ ಚೀಟಿ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರ, ಮನೆಯು ಅರ್ಜಿದಾರರ ಹೆಸರಲ್ಲಿದ್ದು, ಪುರಸಭೆ ಆಸ್ತಿ ತೆರಿಗೆ ವಹಿಯಲ್ಲಿ ದಾಖಲಿರುವ ನಮೂನೆ 24ರ ನಕಲು, ಪಡಿತರ ಚೀಟಿ, ಆಧಾರ್ ನಕಲು ಚುನಾವಣಾ ಗುರುತಿನ ಚೀಟಿ ನಕಲುಗಳೊಂದಿಗೆ ಅರ್ಜಿಯನ್ನು ಅ. 21ರ ಸಂಜೆ 4ರೊಳಗಾಗಿ ಬನ್ನೂರಿನ ಪುರಸಭಾ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.