ಯುವಕರನ್ನು ಕ್ರೀಡೆಯತ್ತ ಸೆಳೆಯಲು ಉತ್ತೇಜನ: ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ
ಕ.ಪ್ರ. ವಾರ್ತೆ ಹುಣಸೂರು ಸೆ.25
ದಸರಾ ಪ್ರಯುಕ್ತ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರನ್ನು ಉತ್ತೇಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಎಂದು ತಟ್ಟೆಕೆರೆ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಹೇಳಿದರು,
ತಾಲೂಕಿನ ಹೊನ್ನೇನಳ್ಳಿ ಗ್ರಾಮದ ರಮೇಶ್ ಎಂಬುವರ ಗದ್ದೆಯಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಉದ್ಯಾನವನ ನಗರಿಯಲ್ಲಿ ಮಾತ್ರ ಕ್ರೀಡೆ ನಡೆಸಲಾಗುತ್ತಿತ್ತು. ಇದರಿಂದ ರೈತಾಪಿ ವರ್ಗದವರು ವಂಚಿತರಾಗುತ್ತಿದ್ದರು. ಇದನ್ನು ಮನಗೊಂಡ ಸರ್ಕಾರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಗ್ರಾಮೀಣ ಕ್ರೀಡೆ ಆಯೋಜಿಸುತ್ತಿರುವುದರಿಂದ ದಸರಾಕ್ರೀಡೆಯಲ್ಲಿ ಎಲ್ಲರೂ ಬಾಗವಹಿಸುವಂತಾಗಿದೆ ಎಂದರು. ಗ್ರಾಮೀಣ ದಸರಾ ಕಾರ್ಯದರ್ಶಿ ಇಒ ಡಾ. ಪ್ರೇಮ್ಕುಮಾರ್ ಮಾತನಾಡಿ, ಸೆ.27 ರಂದು ಪುರಸಭಾ ಮೈದಾನದಲ್ಲಿ ಪುರುಷರಿಗೆ ಗೊಬ್ಬರದ ಚೀಲ ಹೊತ್ತು ಓಡುವ. ಗುಂಡು ಎತ್ತುವ ಸ್ಪರ್ಧೆ ಮತ್ತು ಮಹಿಳೆಯರಿಗಾಗಿ ನೀರಿನ ಬಿಂದಿಗೆ ತಲೆಮೇಲೆ ಎತ್ತಿಕೊಂಡು ಓಡುವ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ದಸರಾ ಅಂಗವಾಗಿ ನಡೆದ ಕೆಸರು ಗದ್ದೆ ಓಟದಲ್ಲಿ ಚಿಕ್ಕಹುಣಸೂರಿನ ಮನು ಪ್ರಥಮ, ಕಿರಿ ಜಾಜಿಯ ಪ್ರಸನ್ನ ದ್ವಿತಿಯ, ಹೊಸಕೋಟೆಯ ನಾಗರಾಜು ತೃತಿಯ ಸ್ಥಾನ ಗಳಿಸಿದರು.ತಾಪಂ ಸದಸ್ಯೆ ಪುಷ್ಪಶಿವಣ್ಣ, ಬಿಸಿಎಂ ಅಧಿಕಾರಿ ರಾಣಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಿಡಿಒ ರಚನಾ. ಡಾ. ಹೇಮಂತ್ಕುಮಾರ್, ಎಇಇಗಳಾದ ಪೂಣಚ್ಚ, ವಾಸುದೇವನ್, ಪಿ.ಆರ್. ರಾಚಪ್ಪ, ಎಸ್. ಜಯರಾಂ ಇದ್ದರು.
ಮೈಸೂರು ವಿವಿ ವ್ಯಾಪ್ತಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರ ಪಿಜಿ ಚಿಂತನೆ
ಕ.ಪ್ರ. ವಾರ್ತೆ ಮೈಸೂರು ಸೆ. 25
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜಿನಲ್ಲೂ ಭೂಗೋಳಶಾಸ್ತ್ರದ ಸ್ನಾತಕೋತ್ತರ ವಿಭಾಗ ತೆರೆಯುವ ಉದ್ದೇಶ ಇದೆ ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು. ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭೂಗೋಳಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಏರ್ಪಡಿಸಿದ್ದ ಐದನೆ ವರ್ಷದ ಶೈಕ್ಷಣಿಕ ಅವಧಿ ಪೂರೈಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜಿನಲ್ಲೂ ಭೂಗೋಳಶಾಸ್ತ್ರ ಅಧ್ಯಯನ ವಿಭಾಗ ತೆರೆಯುವ ಉದ್ದೇಶ ಇದೆ. ಆದರೆ ಸರ್ಕಾರದ ಅನುದಾನ ಕೊರತೆಯೂ ಇದೆ. ಎಲ್ಲಾ ವಿಭಾಗಗಳೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವ ಪ್ರೊ. ಸಿ. ಬಸವರಾಜು ಮಾತನಾಡಿ, ಮುಂದಿನ ಜನಾಂಗವು ಪರಿಜ್ಞಾನದ ಮೂಲಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲವನ್ನು ಮಿತವಾಗಿ ಬಳಸಿ ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಪ್ರಾಂಶುಪಾಲೆ ಪ್ರೊ. ಸ.ನ. ಗಾಯತ್ರಿ, ಆಡಳಿತಾಧಿಕಾರಿ ಪ್ರೊ. ನಾಗರಾಜಮೂರ್ತಿ ಇದ್ದರು.