ವಿದ್ಯಾರ್ಥಿ ಸ್ವತಂತ್ರ ಆಲೋಚನೆ ರೂಢಿಸಿಕೊಳ್ಳಲಿ: ತಳವಾರ್
ಕೆ.ಆರ್. ನಗರ: ವಿದ್ಯಾರ್ಥಿಗಳು ಮನೋಧರ್ಮದ ಮೂಲಕ ಸ್ವತಂತ್ರವಾಗಿ ಆಲೋಚನೆ ಮಾಡುವುದನ್ನು ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗಲಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಜಿಸಿ ಪರೀಕ್ಷೆಗೆ ತರಬೇತಿ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಎಂ.ಎ ಮಾಡಿದರೆ ಸಾಲದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಅದರ ಜತೆಗೆ ನೆಟ್, ಪಿಎಚ್.ಡಿ ಮತ್ತು ಸ್ಲೆಟ್ ನಲ್ಲಿ ತೇರ್ಗಡೆಗೊಂಡರೆ ಉದ್ಯೋಗ ಪಡೆಯಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಸಾತ್ವಿಕ ಜೀವನ ನಡೆಸಿ ಶ್ರದ್ಧೆ, ಗೌರವದಿಂದ ವ್ಯಾಸಂಗ ಮಾಡಿದರೆ ಕನ್ನಡದಲ್ಲೂ ಸಾಧನೆ ಮಾಡಲು ಸಾಧ್ಯವಿದೆ.
ಕನ್ನಡ ಎಂ.ಎ ಮಾಡುವ ವಿದ್ಯಾರ್ಥಿಗಳು ತಪ್ಪದೆ ಬಸವ, ಅಂಬೇಡ್ಕರ್ ಮತ್ತು ಕುವೆಂಪು ವಿಚಾರಧಾರೆ ಓದಬೇಕು, ತರಗತಿಗಳು ಪ್ರಾರಂಭಗೊಂಡ ನಂತರ ತಾವು ಯಾವುದೇ ಸಂಭಾವನೆ ಪಡೆಯದೆ ಉಪನ್ಯಾಸ ಮಾಡುವುದಾಗಿ ಅವರು ಪ್ರಕಟಿಸಿದರು.
ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಭಾದಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಈ ವಿಭಾಗದವರು ತರಬೇತಿ ತರಗತಿಗಳನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಿರುವುದು ಸರಿಯಾದ ಮಾರ್ಗ, ಆದರೆ ಕೇವಲ ಉತ್ಸಾಹ ಇದ್ದರೆ ಸಾಲದು ಇದರಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಡಾ.ಎ. ರಂಗಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾದಯ್ಯ, ಪ್ರಾಂಶುಪಾಲ ಡಾ.ಎಂ.ಎಚ್. ಕೊಂಡರಸಯ್ಯ, ಉಪನ್ಯಾಸಕರಾದ ಡಾ. ಅಪ್ಪಾಜಿಗೌಡ, ಹುರಿಗೌಡ, ಕೆ.ಎಲ್. ರಮೇಶ್, ನಾಗೇಂದ್ರ ಕುಮಾರ್, ಹರೀಶ್, ಪಿ. ಪ್ರಶಾಂತ್ ಇದ್ದರು.
ಗಣೇಶೋತ್ಸವ: ವಿವಿಧ ಕಾರ್ಯಕ್ರಮ
ಹುಣಸೂರು: ಸಾರ್ವಜನಿಕ ಪ್ರಸನ್ನ ವಿನಾಯಕ ಮಂಡಳಿ ವತಿಯಿಂದ ಪುರಸಭಾ ಮೈದಾನದಲ್ಲಿ 49ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸೆ. 26 ರಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.26 ರಂದು ಗುರು ಮೆಲೋಡೀಸ್ ಆರ್ಕೇಸ್ಟ್ರಾ, ಸೆ. 27 ರಂದು ರೋಹನ್ ಅಯ್ಯರ್ ಅವರಿಂದ ಸುಗಮ ಸಂಗೀತ, ಸೆ.28 ರಂದು ಆಲೂರು ನಾಗಪ್ಪ ಅವರಿಂದ ಜಾನಪದ ಗೀತೆಗಳು, ಸೆ.29 ರಂದು ಸುವರ್ಣ ಟಿ.ವಿ ಸ್ಟಾರ್ ಸಿಂಗರ್ ಅನಿಲ್ರಾಜ್ ಅವರಿಂದ ಸಂಗೀತ ಸಂಜೆ, ಸೆ.30 ರಂದು ಸಂಗೀತಾ ಮ್ಯೂಜಿಕ್ ಆರ್ಕೇಸ್ಟ್ರಾ, ಅ.1 ರಂದು ರಾಜು ಅನಂತಸ್ವಾಮಿ ಸುಗಮ ಸಂಗೀತ, ಅ. 2 ರಂದು ಮ್ಯೂಜಿಕ್ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ.