ವಿಮಾನ ನಿಲ್ದಾಣ ವಿಸ್ತರಣೆ ಕಾರ್ಯ ಸಾಗಲಿ
ಮೈಸೂರು: ಮೈಸೂರು ವಿಮಾನ ನಿಲ್ದಾಣದ ಎರಡನೇ ಹಂತದ ವಿಸ್ತರಣಾ ಕಾರ್ಯವನ್ನು ಮೂಲಸೌಲಭ್ಯ ಅಭಿವೃದ್ಧಿ ಕೈಬಿಟ್ಟಿದ್ದಕ್ಕೆ ಪ್ರಜ್ಞಾವಂತ ಹಾಗೂ ಕಳಕಳಿಯುಳ್ಳ ನಾಗರಿಕರ ವೇದಿಕೆ ಸಂಚಾಲಕ ಎಂ. ಲಕ್ಷ್ಮಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬುಧವಾರ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ರನ್ವೇ ಎಟಿಆರ್- 72 ಮಾದರಿಯ ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಿದ್ದು, ಇದರ ಉದ್ದ 1740 ಮೀಟರ್ ಇರುತ್ತದೆ. ಮೈಸೂರು ನಗರವನ್ನು ರಾಷ್ಟ್ರೀಯ ಮೇಲ್ದರ್ಜೆಗೇರಿಸಿ ಇಲ್ಲಿಂದ ದೆಹಲಿ, ಮುಂಬೈ, ಕಲ್ಕತ್ತ ಹಾಗೂ ಇತರೆ ಪ್ರಮುಖ ಸ್ಥಳಗಳಿಗೆ ನೇರವಾಗಿ ವಿಮಾನ ಹಾರಾಟ ಕಲ್ಪಿಸುವ ಉದ್ದೇಶದಿಂದ ರನ್ವೇ ಉದ್ದವನ್ನು 2400 ಮೀಟರ್ಗೆ ವಿಸ್ತರಿಸಲು ಕೇಂದ್ರ ಸರ್ಕಾರ ರು.140 ಕೋಟಿ ಬಿಡುಗಡೆ ಮಾಡಿತ್ತು.ಅದರಂತೆ ಭೂ ಸ್ವಾಧೀನ ಪ್ರಕ್ರಿಯೆ ಕೂಡ ಪ್ರಾರಂಭಿಸಿ ತಾಲೂಕಿನ ಮರಸೆ ಮತ್ತು ಮಂಡಕಳ್ಳಿ ಗ್ರಾಮಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿದ್ದ ಒಟ್ಟು 192 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿರುವ ಹಂತದಲ್ಲಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯವರು ವಿಮಾನ ನಿಲ್ದಾಣ ಎರಡನೇ ಹಂತದ ವಿಸ್ತರಣೆಯನ್ನು ಕೈ ಬಿಡಲಾಗಿದೆ ಎಂಬ ತೀರ್ಮಾನ ಹಿಂದಿ ಬಿಜೆಪಿ ಸರ್ಕಾರ ತೆಗೆದುಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಮಾರ್ಗ ಬದಲಿಸುವ ಪ್ರಕ್ರಿಯೆ ಕೂಡ ಸ್ಥಗಿತಗೊಳ್ಳಲಿದೆ. ಈಗಾಗಲೇ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹಾಲೆ ಹೆದ್ದಾರಿಯನ್ನು ರ್ಮಾಗ ಬದಲಾಯಿಸದೆ 4 ಪಥಗಳಾಗಿ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಯಾರಿ ನಡೆಸುತ್ತಿದೆ ಎಂದರು.ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ: ಅಲ್ಲದೇ ವಿಸ್ತರಣೆ ಕಾರ್ಯ ನಿಲ್ಲಿಸದಿರುವಂತೆ ಸಂಸದ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಯವರು ಕೂಡ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ನಿರ್ಧಾರವನ್ನು ಪುನರ್ ಪರೀಶಿಲಿಸುವಂತೆ ಸರ್ಕಾರ ಆದೇಶಿಸಬೇಕು. ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.
ವಾಲ್ಮೀಕಿ ಜಯಂತಿ; ಆಚರಣೆಗೆ ನಿರ್ಧಾರ
ಮೈಸೂರು: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.18 ರಂದು ನಗರದಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಮತ್ತು ವಾಲ್ಮೀಕಿ ಜನಾಂಗದ ಸಂಘ ಸಂಸ್ಥೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್ ಮಾತನಾಡಿ, ಅ. 18ರ ಬೆಳಿಗ್ಗೆ 9.30ಕ್ಕೆ ಅರಮನೆ ಆವರಣದ ಆಂಜನೇಯಸ್ವಾಮಿ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಹಾಗೂ ವಿವಿಧ ಸ್ತಬ್ಧಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆಯು ಕೃಷ್ಣರಾಜ ವೃತ್ತ ಮಾರ್ಗವಾಗಿ ದೇವರಾಜು ಅರಸು ರಸ್ತೆ ಮೂಲಕ ಸಾಗಿ ಕಲಾಮಂದಿರವನ್ನು ಸೇರಿಲಿದೆ.ನಂತರ ಕಲಾಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸುವರು. ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ವಾಲ್ಮೀಕಿ ಜನಾಂಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಚಿಕ್ಕಮಾದು ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಆಡಂಬರಕ್ಕಾಗಿ ಆಚರಿಸದೆ, ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಆಚರಿಸಬೇಕೆಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.
ವಾಲ್ಮೀಕಿ ಜಯಂತಿ ಆಚರಣೆಗೆ ಜಿಲ್ಲಾ ಮಟ್ಟದಲ್ಲಿ ರು. 25 ಸಾವಿರ ಹಾಗೂ ಎಲ್ಲ ತಾಲೂಕುಗಳಲ್ಲಿ ಜಯಂತಿ ಆಚರಣೆಗೆ ತಲಾ ರು. 5 ಸಾವಿರಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.