ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಮುಖ್ಯ
ಕ.ಪ್ರ. ವಾರ್ತೆ ಪಿರಿಯಾಪಟ್ಟಣ ಸೆ. 25
ಸಹಕಾರ ಸಂಘಗಳ ಸದಸ್ಯರು ಸಹಕಾರ ನೀಡಿದಾಗ ಮಾತ್ರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜು ಹೇಳಿದರು.
ಪಟ್ಟಣದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳು ಉದ್ಘಾಟನೆಯಾದರೆ ಸಾಲದು, ಅವು ಅಭಿವೃದ್ಧಿ ಹೊಂದುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಆಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಪಿ. ಪ್ರಶಾಂತ್ಗೌಡ ಮಾತನಾಡಿ, ಸೊಸೈಟಿಯು 2012-13ನೇ ಸಾಲಿನಲ್ಲಿ ಸಂಘವು ವಿವಿಧ ರೂಪದಲ್ಲಿ 1.60 ಕೋಟಿ ಸಾಲ ನೀಡಿದ್ದು, ಒಟ್ಟು ರು.3 ಲಕ್ಷ ನಿವ್ವಳ ಲಾಭ ಗಳಿಸಿದೆ. ಸೊಸೈಟಿಯಲ್ಲಿ 610 ಷೇರುದಾರರಿದ್ದು, 1,300 ಕ್ಕೂ ಹೆಚ್ಚು ಮಂದಿ ಪಿಗ್ನಿ ಕಟ್ಟುತ್ತಿದ್ದು, ಪ್ರತಿದಿನ 50 ರಿಂದ 60 ಸಾವಿರ ಪಿಗ್ನಿ ಸಂಗ್ರಹವಾಗುತ್ತಿದ್ದು, ಸೊಸೈಟಿಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದ್ದು, ಷೇರುದಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೆ.ಆರ್. ನಗರದ ನವನಗರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ನ ಸಂಸ್ಥಾಪಕ ದಿನೇಶ್, ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಬಿ.ಎ. ಪ್ರಕಾಶ್, ಸಿ.ಆರ್. ದೇವರಾಜ್, ಎಸ್.ಆರ್. ದಿನೇಶ್, ಎ.ಪಿ. ದಿನೇಶ್ಕುಮಾರ್, ಕೆ.ಎನ್. ನಟೇಶ್, ಡಿ.ಆರ್. ಶಹಬಾಜ್, ಶೃತಿ ಮಂಜುನಾಥ್ ಇದ್ದರು.
ಬಲರಾಂರಿಂದ ಡೋಂಗಿ ರಾಜಕಾರಣ: ಟೀಕೆ
ಟಿ. ನರಸೀಪುರ: ಜಿಪಂ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ ಅವರು ಡೋಂಗಿತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಕೆಬ್ಬೆಹುಂಡಿ ಮಹೇಶ್ ಟೀಕಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸೋಲಿಸಲು ಕೆಲವರು ಅಪಪ್ರಚಾರದ ಕರಪತ್ರಗಳನ್ನು ಹಂಚಿದವರನ್ನೇ ಕೆ.ಸಿ. ಬಲರಾಂ ಅವರು ರಾಜ್ಯ ಕುರುಬರ ಸಂಘದ ಚುನಾವಣೆಯ ನೆಪದಲ್ಲಿ ಸಿದ್ದರಾಮಯ್ಯ ಅವರ ಬಳಿಗೆ ಕರೆದೊಯ್ದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವವರನ್ನು ಜೊತೆಯಲ್ಲಿ ಕರೆತರುವ ಕೆ.ಸಿ. ಬಲರಾಂ ಹಾಗೂ ಅವರ ಬೆಂಬಲಿಗರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ದೂರವಿಡಬೇಕು. ನಿಷ್ಠಾವಂತ ಕಾರ್ಯಕರ್ತರ ಕೆಲಸ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ, ಹಾಲಿ ಗ್ರಾಪಂ ಸದಸ್ಯರಾದ ಮಹದೇವ, ಮಹದೇವಯ್ಯ, ಕೆಂಪನಪುರ ಮಹದೇವ, ಮುಖಂಡರಾದ ಕೈಯಂಬಳ್ಳಿ ಸುರೇಶ್, ಎಂ. ರೇವಣ್ಣ, ಮಹದೇವಯ್ಯ, ಸಿದ್ದರಾಜು, ಬಸವರಾಜು, ನಾಗರಾಜು, ಚನ್ನಬಸವೇಗೌಡ, ರಾಜಣ್ಣ, ಶಿವಸ್ವಾಮಿ ಇದ್ದರು.