ಸಹಕಾರ ಸಂಘಕ್ಕೆ ರು. 18.22 ಲಕ್ಷ ಲಾಭ
ಪಿರಿಯಾಪಟ್ಟಣ: ತಾಲೂಕಿನ ನಂದಿನಾಥಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2012-13ನೇ ಸಾಲಿನಲ್ಲಿ 18.22 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ಎಚ್.ಡಿ. ರಾಜೇಂದ್ರ ಹೇಳಿದರು.
ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘ ಕಳೆದ ಸಾಲಿನಲ್ಲಿ 90 ಕೋಟಿ ವಹಿವಾಟು ನಡೆಸಿದೆ. ಸಂಘದಿಂದ ವಿವಿಧ ರೂಪಗಳಲ್ಲಿ ರು.20 ಕೋಟಿ ಸಾಲ ವಿತರಿಸಲಾಗಿದೆ.
ರೈತರು ಕೇವಲ ತಂಬಾಕನ್ನೇ ನೆಚ್ಚಿಕೊಳ್ಳದೆ ತಂಬಾಕಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಆಗ ಮಾತ್ರ ಹೆಚ್ಚಿನ ಅಭಿವೃದ್ದಿ ಕಾಣಲು ಸಾಧ್ಯ. ಸರ್ಕಾರವು ಕಳೆದ ಬಾರಿ ಸಾಲ ಮನ್ನಾ ಮಾಡಿ ಸಾಲ ಮನ್ನವಾದ ರೈತರಿಗೆ ಮಾತ್ರ ಸಾಲ ವಿತರಣೆ ಮಾಡಲು ನಿರ್ದೇಶನ ನೀಡಿತ್ತು. ಅದರಂತೆಯೇ ಸಾಲ ವಿತರಣೆ ಮಾಡಲಾಗಿದೆ. ಆದರೆ ಸಾಲ ತೆಗೆದುಕೊಂಡ ಕೆಲವು ರೈತರು ಸಾಲ ಮರುಪಾವತಿ ಮಾಡದೆ ಸರ್ಕಾರ ಸಾಲ ಮನ್ನಾ ಮಾಡಲಿದೆ ಎಂದು ಕಾಯುತ್ತಿದ್ದಾರೆ ಇದು ಸೂಕ್ತವಲ್ಲ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಪಿ.ವಿ. ಜಲೇಂದ್ರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸುಕುಮಾರ್, ವಿರೂಪಾಕ್ಷ, ಸಣ್ಣಸ್ವಾಮಿಗೌಡ, ರಾಜು, ಚಂದ್ರು, ಜ್ಯೋತಿ, ಕುಳ್ಳಯ್ಯ, ಶೇಖರ್, ವಿವಿಧ ವಿಭಾಗಗಳ ವ್ಯವಸ್ಥಾಪಕರಾದ ರಾಜೇಗೌಡ, ಬಸವರಾಜ್, ಸಿಬ್ಬಂದಿಗಳಾದ ಸ್ವಾಮಿಗೌಡ, ಯೋಗೇಶ್, ರಾಜಶೇಖರಮೂರ್ತಿ, ಶೇಖರ್, ರಮೇಶ್ ಇದ್ದರು.
ದೀನದಯಾಳ್ ಜಯಂತಿ ಆಚರಣೆ
ಕೆ.ಆರ್. ನಗರ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜಯಂತಿ ಆಚರಿಸಲಾಯಿತು.
ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಜನಸಂಘ ಸ್ಥಾಪನೆ ಮಾಡುವಲ್ಲಿ ಉಪಾಧ್ಯಾಯರು ಪ್ರಮುಖರಾಗಿದ್ದು, ಸನಾತನ ಹಿಂದೂ ಧರ್ಮದ ಸಂಘಟನೆಗಾಗಿ ಮತ್ತು ಜನಸಂಘ, ಬಿಜೆಪಿ ಸಂಘಟಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು ಎಂದು ಹೇಳಿದರು. ಬಿಜೆಪಿ ಮುಖಂಡರಾದ ಗೋಪಾಲರಾಜ್, ಬಾಲಮನೋಹರ, ಮಲ್ಲಿಕಾರ್ಜುನಪ್ಪ, ಶಶಿಧರ್ಮೂರ್ತಿ, ಉಮೇಶ್, ಪ್ರಭಾಕರ್ ಜೈನ್, ಚಂದ್ರಶೇಖರ್, ರಾಜು, ಪರಶುರಾಮ್, ಅರುಣ್ಕುಮಾರ್, ಪೂಜಾರಿಬಾಬು ಇದ್ದರು.