ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

16 ಮಾಹಿತಿ ಕೇಂದ್ರ ಸ್ಥಾಪನೆ

Srinivasa Murthy VN
Updated On : 27 Sept 2013, 12:08 pm

ಕ.ಪ್ರ.ವಾರ್ತೆ ಮೈಸೂರು ಸೆ. 26
ದಸರಾ ಕಾರ್ಯಕ್ರಮ, ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲು 16 ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.
ಈ ಮಾಹಿತಿ ಕೇಂದ್ರಗಳಲ್ಲಿ ನಿರ್ವಹಣೆಗಾಗಿ ಪ್ರವಾಸೋದ್ಯಮ ಕೋರ್ಸ್ ಓದುತ್ತಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರವಾಸೋದ್ಯಮ ಸದಸ್ಯರಾಗಿ ನಿಯೋಜಿಸಲಾಗುತ್ತದೆ. ಇವರು ಮಾಹಿತಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುವ ಜೊತೆಗೆ ಪ್ರವಾಸಿ ಮಾಹಿತಿ ಸ್ಥಳಗಳ ಕೈಪಿಡಿ, ದಸರಾ ಕಾರ್ಯಕ್ರಮದ ಪಟ್ಟಿಯನ್ನು ಉಚಿತವಾಗಿ ಪ್ರವಾಸಿಗರಿಗೆ ನೀಡಲಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂತ ಫಿಲೋಮಿನಾ ಚರ್ಚ್, ಚಾಮರಾಜೇಂದ್ರ ಮೃಗಾಲಯ, ಅಂಬಾವಿಲಾಸ ಅರಮನೆ ವರಹಾ ಗೇಟ್, ಬಲರಾಮ ದ್ವಾರ, ಗ್ರಾಮಾಂತರ ಬಸ್ ನಿಲ್ದಾಣ, ಚಾಮುಂಡಿಬೆಟ್ಟ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಒಳಾವರಣ ಮತ್ತು ಹೊರಾವರಣ, ದಸರಾ ವಸ್ತುಪ್ರದರ್ಶನ, ಸೋಮನಾಥಪುರ, ಶ್ರೀರಂಗಪಟ್ಟಣ, ನಂಜನಗೂಡು, ತಲಕಾಡು, ಹುಣಸೂರು ಮತ್ತು ಟಿ.ನರಸೀಪುರದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗುವುದು ಎಂದರು.
ವಿದೇಶಿ ಕರೆ ಸಂಪರ್ಕ: ಮೈಸೂರಿನಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ವಿದೇಶಿ ಪ್ರವಾಸಿಗಳಿಗೆ ಮಾಹಿತಿ ನೀಡಲಿದ್ದಾರೆ. ಮಾಹಿತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವಿದೇಶಿ ವಿದ್ಯಾರ್ಥಿಗಳ ಮೊಬೈಲ್ಗೆ ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಗೆ ಬರುವ ವಿದೇಶಿ ಕರೆಗಳ ಸಂಪರ್ಕ ಒದಗಿಸಲಾಗುತ್ತದೆ. ಆ ವಿದ್ಯಾರ್ಥಿಗಳು ವಿದೇಶಿಯರಿಗೆ ತಮ್ಮದೇ ಭಾಷೆಯಲ್ಲಿ ಮೈಸೂರು ಮತ್ತು ದಸರಾ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಪಾರಂಪರಿಕ ದಸರಾ ಟಾಂಗಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಪ್ರವಾಸಿಗರಿಗೆ ಇದರ ಪ್ರಯೋಜನ ದೊರೆಯುವಂತೆ ಮಾಡಲು 20 ಸಾರೋಟು ಮತ್ತು ಟಾಂಗಾಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸಮವಸ್ತ್ರ, ಮೈಸೂರು ಪೇಟ ನೀಡಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಟಾಂಗಾದವರಿಗೆ ತಲಾ 1000 ಗೌರವಧನ ನೀಡಲಾಗುತ್ತದೆ ಎಂದರು.
ಸಮಿತಿಯ ಕಾರ್ಯಕ್ರಮಗಳಿಗೆ ಅ.5ರ ಮಧ್ಯಾಹ್ನ 3ಕ್ಕೆ ಅರಮನೆ ಆವರಣದಲ್ಲಿ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಚಾಲನೆ ನೀಡುವರು. ಸಮಿತಿಗೆ 2 ಲಕ್ಷ ಅನುದಾನ ಬಂದಿದ್ದು, ಕರಪತ್ರ, ಮಾಹಿತಿ ಕೇಂದ್ರ ಇನ್ನಿತರ ಸೌಲಭ್ಯಗಳಿಗೆ ಪ್ರಾಯೋಜಕತ್ವ ಪಡೆಯಲಾಗಿದೆ ಎಂದು ತಿಳಿಸಿದರು. ದಸರಾ ಉಪ ವಿಶೇಷಾಧಿಕಾರಿಯಾದ ಎಚ್.ಎನ್. ರಮೇಶ್, ಸಮಿತಿಯ ಕಾರ್ಯಾಧ್ಯಕ್ಷ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಶಿವಲಿಂಗಪ್ಪ, ಕಾರ್ಯದರ್ಶಿಯಾದ ಸಾರ್ವಜನಿಕ ಗ್ರಂಥಾಲಯ ಉಪ ನಿರ್ದೇಶಕ ಮಂಜುನಾಥ್, ಉಪಾಧ್ಯಕ್ಷ ಪ್ರೊ.ಕೆ.ಸಿ. ಶಿವಕುಮಾರ್, ಸದಸ್ಯರಾದ ಸಿ.ಜಿ. ಶಿವಕುಮಾರ್, ಮಧುಕರ್ ಅಪ್ಪಾಜಿ, ಬಾಲಕೃಷ್ಣ, ನಟೇಶ್, ಅನ್ಸರ್ ಅಹಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement