ಜಾನಪದ ತಾತ್ಸಾರ ಸರಿಯಲ್ಲ:ಎಚ್. ಜನಾರ್ದನ್
ಕ.ಪ್ರ.ವಾರ್ತೆ ಮೈಸೂರು ಸೆ. 26
ಜಾನಪದ ತಾತ್ಸಾರ ಸರಿಯಲ್ಲ ಎಂದು ರಂಗಾಯಣ ನಿರ್ದೇಶಕರಾಗಿ ನೇಮಕವಾಗಿರುವ ಎಚ್. ಜನಾರ್ದನ್ ಹೇಳಿದರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಗುರುವಾರ ಸಮರ್ಪಣ ಸಂಸ್ಥೆ ಏರ್ಪಡಿಸಿದ್ದ ಜಾನಪದ ನೃತ್ಯಗಳ ಪ್ರದರ್ಶನ ಮತ್ತು ಜಾನಪದ ಝೇಂಕಾರ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದವನ್ನು ತಾತ್ಸಾರದಿಂದ ನೋಡುತ್ತಿರುವುದು ಬೇಸರದ ಸಂಗತಿ. ಜಾನಪದ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಸಂಸ್ಕೃತಿಯ ಮೂಲವೆ ಜಾನಪದ. ಜಾನಪದ ಬಿಟ್ಟರೆ ಜ್ಞಾನ ಮತ್ತು ಮನುಷ್ಯತ್ವ ಕಳೆದುಕೊಂಡಂತೆ. ಪ್ರತಿ ಕಲೆಯ ಮೂಲವೂ ಜಾನಪದವೆ. ಅಕ್ಷರಸ್ಥರು ರಾಕ್ಷಸರಂತೆ ವರ್ತಿಸುತ್ತಾರೆ. ಅವರಿಗೆ ಜಾನಪದ ಸ್ಪರ್ಶ ದೊರೆತರೆ ಮನುಷ್ಯತ್ವ ಬೆಳೆಯುತ್ತದೆ ಎಂದು ಹೇಳಿದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ, ಸಂಸ್ಥೆಯ ಲಕ್ಷ್ಮಿರಾಮ್, ಶಿಬಿರ ನಿರ್ದೇಶಕ ಕೃಷ್ಣಮೂರ್ತಿ ತಲಕಾಡು ಇದ್ದರು.