ನಾಳೆ ನೀರು ಪೂರೈಕೆ ವ್ಯತ್ಯಯ
ಮೈಸೂರು: ನಗರಕ್ಕೆ ನೀರು ಸರಬರಾಜು ಮಾಡುವ ಮೇಳಾಪುರ ಯಂತ್ರಾಗಾರಕ್ಕೆ ಸೆ.28 ರಂದು ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವ ಕಾರಣ, ಅಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಪಾಲಿಕೆ ಆಯುಕ್ತ ಪಿ.ಜಿ ರಮೇಶ್ ತಿಳಿಸಿದ್ದಾರೆ. ಎನ್.ಆರ್. ಮೊಹಲ್ಲಾ, ಕೆಸರೆ, ನಾಯ್ಡು ನಗರ, ಸಿದ್ಧಾರ್ಥನಗರ, ಯರಗನಹಳ್ಳಿ, ವಿದ್ಯಾನಗರ, ರಾಜೀವನಗರ, ಉದಯಗಿರಿ, ಗಾಂಧಿನಗರ, ಶಾಂತಿನಗರ, ಮಹಮ್ಮದ್ ಸೇಠ್ ಬ್ಲಾಕ್, ಆಲನಹಳ್ಳಿ, ಆಲನಹಳ್ಳಿ ಗ್ರಾಮ, ಗೌಸಿಯಾನಗರ, ರಾಘವೇಂದ್ರನಗರ, ಕ್ಯಾತನಮಾರನಹಳ್ಳಿ. ಕೆ.ಎನ್. ಪುರ, ಜೆಎಸ್ಎಸ್ ನಗರ, ಶಕ್ತಿನಗರ, ಕಲ್ಯಾಣಗಿರಿ ಹಾಗೂ ಗಿರಿದರ್ಶಿನಿ ಬಡಾವಣೆ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗಲಿದ್ದು, ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ಸಂಗ್ರಹಿಸಿಕೊಂಡು ಸಹಕರಿಸಬೇಕು ಎಂದಿದ್ದಾರೆ.
ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಮೈಸೂರು: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಿಯಮಿತ ವತಿಯಿಂದ 2013-14ನೇ ಸಾಲಿನಲ್ಲಿ ಜಿಎನ್ಎಂ, ಬಿ.ಎಸ್ಸಿ, ನರ್ಸಿಂಗ್ ತರಬೇತಿ ಪಡೆಯುತ್ತಿರುವ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಂದ ಕೋರ್ಸು ಮತ್ತು ನಿರ್ವಹಣಾ ವೆಚ್ಚ ಮಂಜೂರಾತಿಗಾಗಿ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಕಚೇರಿ ವೇಳೆಯಲ್ಲಿ ಜಿಲ್ಲಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇಲ್ಲಿ ಪಡೆಯಬಹುದು ಅರ್ಜಿ ಸಲ್ಲಿಸಲು ಅ. 20 ಕಡೆ ದಿನ.
ಕಾಡಾ ನೂತನ ಕಚೇರಿ ಆರಂಭ
ಮೈಸೂರು: ಸರ್ಕಾರದ ಆದೇಶದನ್ವಯ ಕಾಡಾ ನಿರ್ದೇಶನಾಲಯ ಸ್ಥಾಪಿಸಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ಕಾವೇರಿ ಜಲಾನಯನ ಯೋಜನೆಗಳು, ಅಧೀನ ಎಂಜಿನಿಯರಿಂಗ್ ವಿಭಾಗ ಮತ್ತು ಉಪವಿಭಾಗಗಳನ್ನು ಸೃಷ್ಟಿಸಲಾಗಿದೆ. ಇದರನ್ವಯ ಆಡಳಿತಾಧಿಕಾರಿಗಳು, ಕಾಡಾ ಕಾವೇರಿ ಜಲಾನಯನ ಯೋಜನೆಗಳ ಆದೇಶದಂತೆ ಕಾರ್ಯಪಾಲಕ ಎಂಜಿನಿಯರಿಂಗ್, ವಿಭಾಗ ಸಂಖ್ಯೆ 1 ಮತ್ತು ಉಪವಿಭಾಗ ಸಂಖ್ಯೆ 1ರ ಕಚೇರಿಗಳ ವ್ಯಾಪ್ತಿ ನಿಗದಿಪಡಿಸಿ ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ಕಾರ್ಯಪಾಲಕ ಎಂಜಿನಿಯರ್ ವಿಭಾಗ ಸಂಖ್ಯೆ 1, ಕಾಡಾ ಕಾವೇರಿ ಜಲಾನಯನ ಯೋಜನೆ, ವಿಜಯನಗರ ಒಂದನೇ ಹಂತ, ಕಾಳಿದಾಸ ರಸ್ತೆ, ಮೈಸೂರು-17, ಇಲ್ಲಿ ಕೇಂದ್ರ ಸ್ಥಾನವಾಗಿರಿಸಿ ಹೊಸದಾಗಿ ಕಾರ್ಯ ಆರಂಭಿಸಿದೆ. ಆದ್ದರಿಂದ ಈ ವಿಳಾಸದಲ್ಲಿ ಎಲ್ಲ ರೀತಿಯ ಪತ್ರ ವ್ಯವಹಾರಗಳನ್ನು ಮಾಡಲು ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.
ಅನ್ನ ಸಂತರ್ಪಣೆ
ಮೈಸೂರು: ಬಿಗ್ ಬಜಾರ್ ವತಿಯಿಂದ 50ನೇ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸೆ.27ರ ಮಧ್ಯಾಹ್ನ 12 ರಿಂದ 3ರವರೆಗೆ ಆಯೋಜಿಸಲಾಗಿದೆ ಎಂದು ಮಳಿಗೆಯ ವ್ಯವಸ್ಥಾಪಕ ನವೀನ್ ಪ್ರಕಾಶ್ ತಿಳಿಸಿದರು. ಕಳೆದ 49 ತಿಂಗಳಿಂದ ನಡೆಸಿದ ಅನ್ನಸಂತರ್ಪಣೆ ಯಶಸ್ವಿಯಾಗಿದ್ದು, 50ನೇ ಅನ್ನಸಂತರ್ಪಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪೊರೆಯ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಹಾ ಅನ್ನಸಂತರ್ಪಣೆಯಲ್ಲಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಾಹಿತಿ ಡಾ.ಸಿಪಿಕೆ ಪಾಲ್ಗೊಳ್ಳುವರು.
ಬಿಜೆಪಿಗೆ ನೇಮಕ
ಮೈಸೂರು: ಬಿಜೆಪಿಯ ನಗರ ಹಿಂದುಳಿದ ವರ್ಗ ಅಧ್ಯಕ್ಷರಾಗಿ ಚಾಮರಾಜ ಮೊಹಲ್ಲಾದ ಕುಂಬಾರಗೇರಿಯ ನಿವಾಸಿ ಜೋಗಿ ಮಂಜು, ನಗರ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿಪುರಂನ ನಿವಾಸಿ ವಿ.ಎನ್. ಕೃಷ್ಣ, ನಗರ ಉಪಾಧ್ಯಕ್ಷರನ್ನಾಗಿ ಅಶೋಕರಸ್ತೆಯ ಅನೂಜ್ ಸಾರಸ್ವತ್ ಅವರನ್ನು ನೇಮಕ ಮಾಡಲಾಗಿದೆ.