ಫಾರ್ಮಸಿ ಪದವೀಧರರಿಗೆ ಹೇರಳ ಅವಕಾಶ
ಕ.ಪ್ರ.ವಾರ್ತೆ ಮೈಸೂರು ಸೆ. 26
ಇಂದು ಫಾರ್ಮಸಿ ಪದವೀಧರರಿಗೆ ವಿಫುಲ ಅವಕಾಶವಿದೆ ಎಂದು ಕೆ.ಆರ್. ಆಸ್ಪತ್ರೆ ಮುಖ್ಯ ಔಷಧತಜ್ಞ ಎಸ್.ಎಸ್. ದೇಶಪಾಂಡೆ ಹೇಳಿದರು.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಆಸ್ಪತ್ರೆಗಳ ಔಷಧಾಲಯಗಳ ಸವಾಲು ಹಾಗೂ ಅವಕಾಶಗಳು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಔಷಧ ತಜ್ಞರ ವೃತ್ತಿಯಲ್ಲಿ ಸೇವಾ ಮನೋಭಾವ ಉಳ್ಳವರು ಹೆಚ್ಚಾದಾಗ ಮಾತ್ರ ಶ್ರದ್ಧೆಯಿಂದ ಕೆಲಸ ಮಾಡಲು ಆಸ್ಪದವಿದೆ. ನಮಗೆ ರೋಗಿಗಳನ್ನು ತುರ್ತಾಗಿ ಸೇವೆ ಮಾಡಿದ ಸಮಾಧಾನ ದೊರೆಯಲಿದೆ. ವೈದ್ಯಕೀಯ ಕ್ಷೇತ್ರ ಬೃಹತ್ತಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಫಾರ್ಮಸಿ ಶಿಕ್ಷಣಕ್ಕೆ ಅವಕಾಶಗಳು ವಿಫುಲವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮುರುಗನ್ ಮೆಡಿಕಲ್ ಗ್ರೂಫ್ ಅಧ್ಯಕ್ಷ ಎನ್. ನರೇಂದ್ರಬಾಬು, ಔಷಧ ವ್ಯಾಪಾರಿಗಳ ಬಳಿ ಬರುವ ರೋಗಿಗಳಿಗೆ ಔಷಧ ಬಗ್ಗೆ ಸರಿಯಾದ ಮಾಹಿತಿ ನೀಡಿ ಅವರಿಗೆ ಮಾನಸಿಕ ಧೈರ್ಯ ತುಂಬಬೇಕು. ವೈದ್ಯರು ಬರೆದು ಕೊಡುವ ಚೀಟಿಗೆ ಅನುಗುಣವಾಗಿ ಮಾತ್ರೆ ಮತ್ತು ಔಷಧಗಳನ್ನು ವಿತರಿಸುವುದು ಸಮುದಾಯ ಫಾರ್ಮಾಸಿಸ್ಟ್ಗಳ ಕರ್ತವ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವೃತ್ತಿಪರ ಫಾರ್ಮಿಸಿಸ್ಟಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಕೆ.ಜೋಷಿ ಹನುಮಂತಾಚಾರ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಎಸ್. ರವಿಶಂಕರ್ ಇದ್ದರು.