ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಂಡಕಳ್ಳಿ ಕೆರೆಗೆ ಕಾರು: ದಂಪತಿ ಪಾರು

Srinivasa Murthy VN
Updated On : 27 Sept 2013, 12:13 pm

ಕ.ಪ್ರ.ವಾರ್ತೆ ಮೈಸೂರು ಸೆ. 26
ಕಾರು ಕೆರೆಗೆ ಬಿದ್ದರೂ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ಕೆರೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೈಸೂರಿನ ಕುವೆಂಪುನಗರ ನಿವಾಸಿಗಳಾದ ವಿಜಯ್ ಮತ್ತು ನಾಗಶ್ರೀ ಪ್ರಾಣಾಪಾಯದಿಂದ ಪಾರಾದವರು. ಇವರು ನಂಜನಗೂಡು ತಾಲೂಕು ದೇವರಸನಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ವಾಪಾಸ್ ಕಾರಿನಲ್ಲಿ ಬರುತ್ತಿದ್ದರು. ಮಂಡಕಳ್ಳಿ ಕೆರೆ ಬಳಿ ಚಾಲನೆ ಮಾಡುತ್ತಿದ್ದ ವಿಜಯ್ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿತ್ತು.
ಇದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ರಕ್ಷಿಸಿದರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ಕೆರೆಯಲ್ಲಿದ್ದ ಕಾರನ್ನು ಹೊರ ತೆಗೆದರು.
ತಡೆಗೋಡೆ ನಿರ್ಮಾಣ: ಇದೇ ಮಾರ್ಗವಾಗಿ ತೆರಳುತ್ತಿದ್ದ ಜಿಲ್ಲಾಧಿಕಾರಿ ಸಿ.ಶಿಖಾ ಅವರು, ವಿಷಯ ತಿಳಿದು ಮಂಡಕಳ್ಳಿ ಕೆರೆ ಬಳಿ ತಮ್ಮ ಕಾರನ್ನು ನಿಲ್ಲಿಸಿ ಸ್ಥಳ ಪರಿಶೀಲಿಸಿದರು. ಕೆರೆಗೆ ತಡೆಗೋಡೆ ನಿರ್ಮಿಸದಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಟಿಪ್ಪರ್ ಡಿಕ್ಕಿ: ಸವಾರ ಸಾವು
ಮೈಸೂರು:
ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕು ಚಿಕ್ಕಹಳ್ಳಿ ಸಮೀಪ ಗುರುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸರ್ತಾಜ್ (45) ಮೃತಪಟ್ಟವರು. ಇವರು ಮೆಕಾನಿಕ್ ಕೆಲಸ ಮಾಡಿಕೊಂಡಿದ್ದು, ಕಾರ್ಯ ನಿಮಿತ್ತ ಕೊಳ್ಳೇಗಾಲದಿಂದ ಮೈಸೂರಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಎದುರಿನಿಂದ ಬಂದ ಟಿಪ್ಪರ್ ಹಾಲು ತುಂಬಿದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾದ ಬಳಿಕ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆ ಎಸ್ಐ ಜಗದೀಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ತಗುಲಿ ರೈತ ಸಾವು
ಮೈಸೂರು:
ಜಮೀನಿಗೆ ಹೋಗುತ್ತಿದ್ದ ರೈತನಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೈಸೂರು ತಾಲೂಕು ಇಲವಾಲ ಹೋಬಳಿ ರಟ್ನಹಳ್ಳಿ ನಿವಾಸಿ ಲೇ. ಮಾಲೇಗೌಡ ಎಂಬವರ ಪುತ್ರ ಪುಟ್ಟಸ್ವಾಮಿ (32) ಮೃತಪಟ್ಟವರು. ಇವರು ಪತ್ನಿ ವೀಣಾ ಜೊತೆಗೆ ಬೆಳಗ್ಗೆ ಜಮೀನಿಗೆ ಹೋಗುತ್ತಿದ್ದರು. ರಸ್ತೆಬದಿ ಮೂತ್ರ ವಿರ್ಸಜನೆಗೆ ಕುಳಿತಾಗ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ವಿದ್ಯುತ್ ಕಂಬಕ್ಕೆ ಅಳವಡಿಸಲಾಗಿದ್ದ ಗ್ರೌಂಡರ್ ತಂತಿ ತಗುಲಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ. ಸೆಸ್ಕ್ ನಿರ್ಲಕ್ಷ್ಯವೇ ಪುಟ್ಟಸ್ವಾಮಿ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಸಾವು
ಮೈಸೂರು:
ನಗರ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 65 ವರ್ಷ, 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ- ಕಂದು ಬಣ್ಣ ಮಿಶ್ರಿತ ಶರ್ಟ್, ಖಾಕಿ ಫ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ
ಮೈಸೂರು:
ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕು ಕಮ್ಮರಹಳ್ಳಿ ನಿವಾಸಿ ಸಣ್ಣಯ್ಯ ಎಂಬವರ ಪುತ್ರ ರಾಮಯ್ಯ (39) ಬಂಧಿತ ಆರೋಪಿ. ಈತ ಅಂಗಡಿಯಲ್ಲಿ 50 ಬಾಟಲಿ ಮದ್ಯವನ್ನು ಅಕ್ರಮವಾಗಿ ಇರಿಸಿಕೊಂಡು ಮಾರಾಟ ಮಾಡುತ್ತಿದ್ದ. ಆರೋಪಿ ರಾಮಯ್ಯನನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿ, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಲವಾಲ ಠಾಣೆ ಎಸ್ಐ ಪುನೀತ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement