ಮಂಡಕಳ್ಳಿ ಕೆರೆಗೆ ಬಿದ್ದ ಕಾರು: ದಂಪತಿ ಪಾರು
ಮೈಸೂರು: ಕಾರು ಕೆರೆಗೆ ಬಿದ್ದರೂ ದಂಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ಕೆರೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೈಸೂರಿನ ಕುವೆಂಪುನಗರ ನಿವಾಸಿಗಳಾದ ವಿಜಯ್ ಮತ್ತು ನಾಗಶ್ರೀ ಪ್ರಾಣಾಪಾಯದಿಂದ ಪಾರಾದವರು. ಇವರು ನಂಜನಗೂಡು ತಾಲೂಕು ದೇವರಸನಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಕಾರಿನಲ್ಲಿ ಬರುತ್ತಿದ್ದರು. ಮಂಡಕಳ್ಳಿ ಕೆರೆ ಬಳಿ ಚಾಲನೆ ಮಾಡುತ್ತಿದ್ದ ವಿಜಯ್ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿತು. ಇದನ್ನು ಗಮನಿಸಿದ ಸಾರ್ವಜನಿಕರುಅವರನ್ನು ರಕ್ಷಿಸಿದರು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ಕೆರೆಯಲ್ಲಿ ಕಾರನ್ನು ಹೊರ ತೆಗೆದರು. ತಡೆಗೋಡೆ ನಿರ್ಮಾಣ- ಭರವಸೆ: ಇದೇ ಮಾರ್ಗವಾಗಿ ತೆರಳುತ್ತಿದ್ದ ಜಿಲ್ಲಾಧಿಕಾರಿ ಸಿ.ಶಿಖಾ ಅವರು, ವಿಷಯ ತಿಳಿದು ಮಂಡಕಳ್ಳಿ ಕೆರೆ ಬಳಿ ತಮ್ಮ ಕಾರನ್ನು ನಿಲ್ಲಿಸಿ ಸ್ಥಳ ಪರಿಶೀಲಿಸಿದರು. ಕೆರೆಗೆ ತಡೆಗೋಡೆ ನಿರ್ಮಿಸದಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.