ಭಗತ್ಸಿಂಗ್ ಆದರ್ಶವಾಗಲಿ: ಪ್ರೊ. ಕಾಳಚನ್ನೇಗೌಡ
ಕ.ಪ್ರ.ವಾರ್ತೆ ಮೈಸೂರು ಸೆ. 28
ಭಗತ್ಸಿಂಗ್ ಆದರ್ಶವನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಮಹಾರಾಜ ಕಾಲೇಜು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕಾಳಚನ್ನೇಗೌಡ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಅವರ 106ನೆ ಜನ್ಮದಿನಾಚರಣೆ ಅಂಗವಾಗಿ ರಾಮಸ್ವಾಮಿ ವೃತ್ತದಲ್ಲಿ ಎಐಡಿವೈಒ ಕಾರ್ಯಕರ್ತರು ಶನಿವಾರ ಏರ್ಪಡಿಸಿದ್ದ ಭಗತ್ಸಿಂಗ್ರ ಸೂಕ್ತಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧೀಜಿ ಅವರಿಗಿಂತ ಭಿನ್ನ ರೀತಿಯಲ್ಲಿ ಹೋರಾಟ ನಡೆಸಿದ ಭಗತ್ಸಿಂಗ್ ರಾಜಿ ರಹಿತ ಹೋರಾಟ ನಡೆಸಿದರು. ಇಂದು ನಮ್ಮವರೆ ನಮ್ಮನ್ನು ಆಳುತ್ತಿದ್ದರೂ ಭ್ರಷ್ಠಾಚಾರ, ಶಿಕ್ಷಣದ ವ್ಯಾಪಾರೀಕರಣ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಇವನ್ನು ತಡೆಗಟ್ಟಲು ಸರ್ಕಾರಗಳು ವಿಫಲವಾಗಿವೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಸಮಬಾಳು, ಸಮಪಾಲು ಎಂಬ ಸಾಮಾಜಿಕ ನ್ಯಾಯ ಕಲ್ಪನೆ ಬರಿ ಕನಸಾಗಿಯೆ ಉಳಿದಿದೆ. ಆದ್ದರಿಂದ ಇಂದಿನ ಯುವ ಜನಾಂಗ ಭಗತ್ಸಿಂಗ್, ಜಯಪ್ರಕಾಶ ನಾರಾಯಣ ಅವರಂತಹ ಕ್ರಾಂತಿಕಾರಿ ವಿಚಾರ ಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಐಡಿವೈಒ ಉಪಾಧ್ಯಕ್ಷೆ ಎಂ. ಉಮಾದೇವಿ ಮಾತನಾಡಿ, ಇಂದು ನಮಗೆ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರನ್ನು ತೋರಿಸಿ ದೇಶಕ್ಕೆ ಇವರು ಪರ್ಯಾಯ ಎಂದು ಬಿಂಬಿಸಲಾಗುತ್ತಿದೆ ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮೋಬಿ, ಎಐಎಂಎಸ್ಎಸ್ ಜಿಲ್ಲಾ ಉಪಾಧ್ಯಕ್ಷ ಸೀಮಾ, ಎಐಡಿಎ ಅಭಿಲಾಷ್ ಪ್ರಸಾದ್, ಮುದ್ದುಕೃಷ್ಣ, ಸುಮ, ರಂಜಿತಾ, ನಾಗೇಶ್, ಅವಿನಾಶ್, ಸಿದ್ದೇಶ್, ಅನಿಲ್, ಚಂದ್ರಕಲಾ, ಶಂಕರ್, ಮಹೇಶ್ ಇದ್ದರು.