ಶಾಲಾ ಸಹಭಾಗಿತ್ವ ಕಾರ್ಯಕ್ರಮ
ಮೈಸೂರು: ಕಲ್ಲೂರು ನಾಗನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಡೆದ ಸಹಭಾಗಿತ್ವ ಶಾಲಾ ಸಮೀಕ್ಷೆ ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಶಿವಾಕರ ಉದ್ಘಾಟಿಸಿದರು. ಸಿಆರ್‌ಪಿ ಎಸ್.ಜೆ. ಗಣೇಶ್ ಮಾತನಾಡಿ, ಶಾಲೆಗಳ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಅವಶ್ಯಕತೆ ಇದೆ. ಈ ಕಾರ್ಯಕ್ರದಲ್ಲಿ ಯಾರೆಲ್ಲ ಭಾಗಿದಾರರು ಶಾಲೆಗೆ ಎಷ್ಟು ಅವಶ್ಯಕ, ಅವರ ಕರ್ತವ್ಯಗಳು, ಜವಾಬ್ದಾರಿಗಳು, ಶಾಲಾ ನಕ್ಷೆ ತಯಾರಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಶಾಲೆಗೆ ಎಲ್ಲ ಭಾಗಿದಾರರ ಸಹಕಾರವನ್ನು ಪಡೆದುಕೊಂಡು ಶಾಲೆಯನ್ನು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಹೇಗೆ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಸಿದರು. ಎಸ್‌ಡಿಎಂಸಿ ವತಿಯಿಂದ ಮಕ್ಕಳಿಗೆ ಹಾಲು ಕುಡಿಯಲು ಲೋಟಗಳು, ಬಲ್ಪ್, ಫ್ಯಾನ್ ಶಾಲೆಗೆ ನೀಡಿದರು. ಡಯಟ್‌ನ ತಾ. ನೋಡಲ್ ಅಧಿಕಾರಿ ದೇವರಾಜ್, ಹೇಮಣ್ಣ, ವೆಂಕಟೇಶ್, ಲಲಿತಾಕ್ಷಿ, ಅಶೋಕ್, ವಿಲೀಡ್ ಸಂಸ್ಥೆಯ ಬೆಳ್ಳೆಗೌಡ, ಮುಖ್ಯ ಶಿಕ್ಷಕಿ ವನಜಾಕ್ಷಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವು ಮತ್ತು ಸದಸ್ಯರು, ಸುಶೀಲ್ ಕುಮಾರ್ ಭಾಗವಹಿಸಿದ್ದರು.
ಪದಾಧಿಕಾರಿಗಳ ನೇಮಕ
ಮೈಸೂರು: ನಗರ ಬಿಜೆಪಿ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಉಪಾಧ್ಯಕ್ಷರಾಗಿ ಎಂ.ಆರ್. ಬಾಲಕೃಷ್ಣ, ರಮೇಶ್, ಸಿ.ಆರ್. ಉಮಾ, ಕೆ. ಆಶಾ ನಾಗಭೂಷಣ್‌ಸಿಂಗ್, ದಾಸ್‌ಪ್ರಕಾಶ್, ಆರ್. ಶ್ರೀನಿವಾಸ್, ಅನೂಜ್ ಸಾರಸ್ವತ್, ಎಲ್. ಜಗದೀಶ್, ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿ ಎಸ್. ಸೋಮಶೇಖರ್, ಮಲ್ಲಪ್ಪಗೌಡ, ವಿ. ಸೋಮಸುಂದರ, ಕಾರ್ಯದರ್ಶಿಗಳಾಗಿ ಎಚ್. ಮನೋಜ್‌ಕುಮಾರ್, ಮಂಜುಳಾ, ಅನ್ನಪೂರ್ಣ, ಎಚ್.ಇ. ಕೃಷ್ಣಮೂರ್ತಿರಾವ್, ಎನ್.ಎನ್. ಕವಿತಾ, ವಿ.ಎನ್. ಕೃಷ್ಣ, ರವಿಚಂದ್ರ, ಖಜಾಂಚಿಯಾಗಿ ಎಚ್.ಎಸ್. ಬಾಲಚಂದ್ರ. ಯುವ ಮೋರ್ಚಾ ಅಧ್ಯಕ್ಷರಾಗಿ ದೇವರಾಜ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶಾಂತಾ , ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಎನ್. ಮಂಜುನಾಥ್, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ದಿನೇಶ್, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಮೈ.ಕಾ. ಪ್ರೇಮ್‌ಕುಮಾರ್, ಸ್ಲಂ ಮೋರ್ಚಾ ಅಧ್ಯಕ್ಷರಾಗಿ ಎನ್. ರಾಜು, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಅನ್ಸರ್ ನೇಮಕವಾಗಿದ್ದಾರೆ.
ಲಾರಿ ಹರಿದು ವಿದ್ಯಾರ್ಥಿ ಸಾವು
ಮೈಸೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಬಿದ್ದ ವಿದ್ಯಾರ್ಥಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವ ಘಟನೆ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಬಳಿ ಶನಿವಾರ ಬೆಳಗ್ಗೆ ನಡೆದಿದೆ. ಮೈಸೂರು ತಾಲೂಕು ಇಲವಾಲ ಹೋಬಳಿ ಈರಪ್ಪನಕೊಪ್ಪಲು ನಿವಾಸಿ ಮಾದಪ್ಪ ಎಂಬವರ ಪುತ್ರ ಎಂ. ಮಂಜು(17) ಮೃತಪಟ್ಟವರು. ಇವರೊಂದಿಗಿದ್ದ ವಿನಯ್‌ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜು ಮಹಾಜನ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ. ವಿನಯ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಈ ಇಬ್ಬರು ಬೈಕಿನಲ್ಲಿ ಪಡುವಾರಹಳ್ಳಿ ಕಡೆಯಿಂದ ಕಲಾಮಂದಿರದತ್ತ ಬರುತ್ತಿದ್ದರು. ಜಲದರ್ಶಿನಿ ಅತಿಥಿ ಗೃಹದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಯ ಬಲಭಾಗಕ್ಕೆ ಬಿದ್ದ ಬೈಕ್ ಸವಾರ ಮಂಜು ಮೇಲೆ ಮರಳು ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿವಿ ಪುರಂ ಸಂಚಾರ ಠಾಣೆ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು
ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ 48 ವರ್ಷದ ಅಪರಿಚಿತ ಮಹಿಳೆ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ. ಇವರು ಸೆ.24ರಂದು ಯಾವುದೋ ಕಾಯಿಲೆಯಿಂದ ಬಳಲಿ ಸರಿಯಾದ ಔಷಧೋಪಚಾರವಿಲ್ಲದೇ ಪ್ರಜ್ಞಾಹೀನರಾಗಿ ರೈಲು ನಿಲ್ದಾಣದಲ್ಲಿ ಬಿದ್ದಿದ್ದರು. ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಮಹಿಳೆಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ರೈಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.