ಕಾರ್ಮಿಕರಿಂದ ಮತದಾನ ಜಾಗೃತಿ
ಹುಣಸೂರು: ಪಟ್ಟಣ ಶುಚಿಗೊಳಿಸುವ ಪೌರಕಾರ್ಮಿಕರು ಸಹ ಪಟ್ಟಣದಲ್ಲಿ ಜಾಥಾ ನಡೆಸಿ ಮತದಾನ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಪಟ್ಟಣದ ಪುರಸಭಾ ಮೈದಾನದಿಂದ ಹೊರಟ ಪೌರಕಾರ್ಮಿಕರು, ಜಾಥಾದುದ್ದಕ್ಕೂ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ, ಆಮಿಷಗಳಿಗೆ ಬಲಿಯಾಗಬೇಡಿ. ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ಮಾರಾಟಕ್ಕಿಲ್ಲ, ಹೀಗೆ ಘೋಷಣೆ ಕೂಗಿದರು.
ಪುರಸಭೆ ಆವರಣದಲ್ಲಿ ಮಂಗಳವಾರ ಸ್ವೀಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸ್ವೀಪ್ನ ಅಧ್ಯಕ್ಷ ತಾಪಂ ಇಒ ಡಾ.ಪ್ರೇಮ್ಕುಮಾರ್, ಸಂಯೋಜನಾಧಿಕಾರಿ ಸಿಡಿಪಿಒ ನವೀನ್ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ರಮೇಶ್, ಪರಿಸರ ಎಂಜಿನಿಯರ್ ರವಿಕುಮಾರ್, ಮುಖ್ಯಪೇದೆ ಕೃಷ್ಣೇಗೌಡ, ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಹಾಗೂ ಅಧಿಕಾರಿಗಳು ಇದ್ದರು.
ಬಿಜೆಪಿ ಎಸ್ಸಿ ಮೋರ್ಚಾ ಸಭೆ ನಾಳೆ
ಪಿರಿಯಾಪಟ್ಟಣ: ಪಟ್ಟಣದ ಶ್ರೀ ಸಾಯಿ ಸಮುದಾಯ ಭವನದಲ್ಲಿ ಏ.10ರ ಗುರುವಾರ ಮಧ್ಯಾಹ್ನ 1ಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಹೇಳಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ಗೌಡ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ತಾಲೂಕಿನ ಕಾರ್ಯಕರ್ತರು ಹಾಜರಾಗುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಪಕ್ಷದ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಸವರಾಜು, ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನಕೇಶವ, ಲೋಕಪಾಲಯ್ಯ, ನಗರ ಘಟಕದ ಅಧ್ಯಕ್ಷ ರವಿ, ಜಿಲ್ಲಾ ಎಸ್ಸಿ ಮೋರ್ಚಾ ಖಜಾಂಚಿ ವಿಜಯಕುಮಾರ್ ಇದ್ದರು.