ಪಾದಯಾತ್ರೆ ಮೂಲಕ ಧ್ರುವನಾರಾಯಣ್ ಮತಯಾಚನೆ
ನಂಜನಗೂಡು: ಪಟ್ಟಣದ ಚಾಮಲಾಪುರದ ಹುಂಡಿ, ಶಂಕರಪುರ, ನೀಲಕಂಠ ನಗರ ಬಡಾವಣೆಯಲ್ಲಿ ಸುಡುಬಿಸಿಲಿನಲ್ಲೂ ಎಡಬಿಡದೆ ಪಾದಯಾತ್ರೆ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಮಂಗಳವಾರ ಮತಯಾಚಿಸಿದರು. ನಂತರ ಅವರು ಮಾತನಾಡಿ, ನನ್ನ ಸಂಸದ ನಿಧಿಯಿಂದ ಅನುದಾನ ನೀಡಿದ್ದೇನೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳ ಮೂಲಕ ಅನುದಾನ ಬರಲು ಶ್ರಮಿಸಿದ್ದೇನೆ. ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಹೇಳಿದರು. ಮುಖಂಡರಾದ ಯು.ಎನ್. ಪದ್ಮನಾಭ್‌ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಸುಬ್ಬಣ್ಣ, ಪುರಸಭಾ ಉಪಾಧ್ಯಕ್ಷ ದೊರೆಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಸಿ.ಎಂ. ಶಂಕರ್, ಮಾಜಿ ಉಪಾಧ್ಯಕ್ಷ ಆರ್. ಮಹದೇವು, ಕೆಪಿಸಿಸಿ ಸದಸ್ಯ ಅಕ್ಬರ್‌ಅಲಿ, ಅಬ್ದುಲ್ ಖಾದರ್, ಪುರಸಭಾ ಸದಸ್ಯರಾದ ಲಿಂಗಪ್ಪ, ಇಂದ್ರಾಣಿ, ಮಾಯಣ್ಣ, ಜಿ.ಎಂ. ವೇಣುಗೋಪಾಲ್, ಗಂಗಾಧರ್, ರೇಲ್ವೆ ಸಲಹಾ ಸಮಿತಿ ಸದಸ್ಯ ಶಿವಣ್ಣ, ಗೋವಿಂದರಾಜು, ಸಿದ್ದಿಕಿ, ಮಾಜಿ ಸದಸ್ಯ ದೊರೆಸ್ವಾಮಿ ಇದ್ದರು. ಇದೇ ವೇಳೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮತ್ತೊಮ್ಮೆ ಆಶೀರ್ವದಿಸಿ
ಮೈಸೂರು: ನಾನು ಸಂಸದನಾಗಿ ಕಳೆದ 5 ವರ್ಷದ ಅವಧಿಯಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡಿರುವುದರಿಂದ, ಮತ್ತೊಂದು ಬಾರಿ ಸೇವೆ ಮಾಡಲು ನನ್ನನ್ನು ಆಶೀರ್ವದಿಸುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ಮಾಡಿದರು. ವರುಣ ಕ್ಷೇತ್ರದ ಉತ್ತನಹಳ್ಳಿ, ಸೋಮೇಶ್ವರಪುರ, ದೇವಲಾಪುರ, ಮೋಸಂಬಾಯನಹಳ್ಳಿ, ಚಿಕ್ಕಳ್ಳಿ, ವಾಜಮಂಗಲ, ಕೀಳನಪುರ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಸೇತುವೆಗಳು, ರಸ್ತೆಗಳು, ರೈಲು ಮಾರ್ಗ, ಸಮುದಾಯ ಭವನಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ರಾಕೇಶ್ ಸಿದ್ದರಾಮಯ್ಯ, ರೇವಣ್ಣ ಸಿದ್ದಯ್ಯ, ಕೆಪಿಸಿಸಿ ಸದಸ್ಯ ನರಸೇಗೌಡ, ಡಿಸಿಸಿ ಸದಸ್ಯರಾದ ಕೃಷ್ಣಕುಮಾರ್ ಸಾಗರ್, ಕೇಶವ್ ಭಾಗವಹಿಸಿದ್ದರು.