ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಜನೂರಲ್ಲಿ ನರೇಂದ್ರ ಪ್ರತಾಪ

Srinivasa Murthy VN
Updated On : 9 Apr 2014, 1:09 am
ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ಭಾರತ ವಿಜಯ ರ್ಯಾಲಿಗೆ ಆಗಮಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಆಲಂಗಿಸಿಕೊಂಡರು.
ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಬಂದಿಳಿದು, ಅಲ್ಲಿಂದ ಪಕ್ಕದ ವೇದಿಕೆಗೆ ಅಂಬಾಸಿಡರ್ ಕಾರಿನಲ್ಲಿ ಬಂದರು.ಕಾರು ಇಳಿದು ವೇದಿಕೆ ಮೇಲೇರಿದ ಮೋದಿ ಅವರಿಗೆ ಪ್ರತಾಪ್ ಸಿಂಹ ನಮಸ್ಕರಿಸಲು ಮುಂದಾದರು. ಈ ವೇಳೆ ಪ್ರತಾಪ್ ಸಿಂಹ ಅವರನ್ನು ಮೋದಿ ಮೇಲೆತ್ತಿ ಬಾಚಿ ಬಿಗಿದಪ್ಪಿಕೊಂಡರು. ತಮ್ಮ ಭಾಷಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಒಂದು ನಿಮಿಷವೂ ಕೂರದ ಮೋದಿ: ವೇದಿಕೆ ಮೇಲೇರಿಯೂ ಒಂದು ನಿಮಿಷವೂ ಕೂರದ ನರೇಂದ್ರ ಮೋದಿ ಅಭ್ಯರ್ಥಿಗಳನ್ನು ಮಾತನಾಡಿಸಿ ನೇರವಾಗಿ ಮೈಕ್‌ನ ಬಳಿ ಹೋಗಿ ಸರಿಯಾಗಿ 23 ನಿಮಿಷ 45 ಸೆಕೆಂಡ್ ಭಾಷಣ ಮಾಡಿದರು. ಮೋದಿಗಾಗಿ ಕಾಯ್ದಿರಿಸಿದ್ದ ಆಸನದಲ್ಲಿ ಮೋದಿ ಕೂರಲೆ ಇಲ್ಲ. ಭಾಷಣ ಮುಗಿಯುತ್ತಿದ್ದಂತೆ ವೇದಿಕೆಯಿಂದಿಳಿದು ಕಾರಿನಲ್ಲಿ ಹೆಲಿಪ್ಯಾಡ್‌ಗೆ ತೆರಳಿದರು.

Advertisement

Advertisement

ವಿಶೇಷ ಮೈಕ್ ಬಳಸಲಿಲ್ಲ: ವೇದಿಕೆ ಮೇಲೆ ಗುಂಡು ನಿರೋಧ ಗಾಜಿನಿಂದ ನಿರ್ಮಿಸಿದ್ದ ಮೈಕ್‌ನ ಮುಂದೆ ನಿಂತು ಮಾತನಾಡದ ಮೋದಿ ಅವರು ಸಾಮಾನ್ಯವಾಗಿ ಎಲ್ಲರೂ ಬಳಸಿದ್ದ ಮೈಕ್‌ನ ಮುಂದೆ ನಿಂತು ಮಾತನಾಡಿದರು.
ವಿಜಯ ರ್ಯಾಲಿಗೆ ಸಹಸ್ರ ಸಹಸ್ರ ಮಂದಿ
ಸ್ವಯಂ ಪ್ರೇರಿತರಾಗಿ ಸೇರಿದ್ದ ಸಾರ್ವಜನಿಕರು, ಆರ್‌ಎಸ್‌ಎಸ್, ಬಿಜೆಪಿ, ನಮೋ ಬ್ರಿಗೇಡ್‌ನ ಪದಾಧಿಕಾರಿಗಳು, ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿ ಸವಿರಾರು ಮಂದಿ ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು. 
ಹಲವು ಮಂದಿ ಮೋದಿ ಫಾರ್ ಪಿಎಂ ಎಂದು ಬರೆಯಲಾಗಿದ್ದ ಕೇಸರಿ ಬಣ್ಣದ ಟೋಪಿ ಧರಿಸಿದ್ದರು. ಮೋದಿ ಭಾಷಣ ಮಾಡುವಾಗ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಮಾತನಾಡುವ ಬಹುತೇಕ ಮಂದಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಮೋದಿ ಆಗಮಿಸಿದ ಹೆಲೆಕ್ಯಾಪ್ಟರ್ ಬರುತ್ತಿದ್ದಂತೆಯೆ ಕೇಸರಿ ಬಣ್ಣದ ಬಿಜೆಪಿ ಬಾವುಟಗಳು ರಾರಾಜಿಸಿತು. ಅಷ್ಟೊತ್ತಿಗಾಗಲೆ ಬಿಸಿಲ ಝಳ ಕಡಿಮೆ ಆಯಿತು. ತಂಪಾದ ಗಾಳಿ ಬೀಸಿತು. ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳ ಖುಷಿ ಎಲ್ಲೆ ಮೀರಿತು. ನೀರಿನ ಪೊಟ್ಟಣದಿಂದ ನೀರಿನ ಸಿಂಚನ ಮಾಡಿ ಆನಂದಿಸಿದರು. ವೇದಿಕೆ ಬಳಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ರಾಜಣ್ಣ, ಎಸಿಪಿ ಬಿ.ಟಿ. ಕವಿತಾ, ಇನ್‌ಸ್ಪೆಕ್ಟರ್‌ಗಳಾದ ಯಶವಂತ್‌ಕುಮಾರ್, ಕಾಂತರಾಜ್ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement