ಏರ್ಪೋರ್ಟ್ ಕೊಡುಗೆ ನೀಡಿದ್ದು ಯಾರು....?
ಮೈಸೂರು: ಮೈಸೂರಿಗೆ ವಿಮಾನ ನಿಲ್ದಾಣ ತರುವಲ್ಲಿ ಸಂಸದರಾದ ಎಚ್.ವಿಶ್ವನಾಥ್ ಕೊಡುಗೆಯಿದೆ ಎಂದು ಅವರ ಪರ ವಾದಿಸಿದರೆ, ಇಲ್ಲ ಇದು ಸಂಸದರಾಗಿದ್ದ ಸಿ.ಎಚ್. ವಿಜಯಶಂಕರ್ ಕೊಡುಗೆ ಎಂದು ಅವರ ಪರ ವಾದಿಸಿದ್ದು ಹಾಗೂ ಮಾತಿನ ಚಕಮಕಿ ನಡೆಸಿದ್ದು ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಂಡುಬಂತು.
ವಿಕಲ ವಿಕಾಸ ಸಂಸ್ಥೆ ಹಾಗೂ ಪೀಪಲ್ಸ್ ಲೀಗಲ್ ಫೋರಂನ ಸಂಯುಕ್ತಾಶ್ರಯದಲ್ಲಿ ಕಸಾಪ ನಗರ ಕಚೇರಿಯಲ್ಲಿ ಏರ್ಪಡಿಸಿದ್ದ ಮೈಸೂರು ಲೋಕಸಭಾ ಅಭ್ಯರ್ಥಿಗಳೊಂದಿಗೆ ಅಂಗವಿಕಲರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಎಂಬ ವಿಷಯ ಕುರಿತ ಸಂವಾದದಲ್ಲಿ ಅಭ್ಯರ್ಥಿಗಳ ಪರವಾಗಿ ಹಲವರು ಭಾಗವಹಿಸಿ ಮಾತನಾಡಿದರು.
ಎಚ್.ವಿಶ್ವನಾಥ್ ಪರ ಮಾತನಾಡಿದ ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ್, ಸಂಸದರಾಗಿ ವಿಶ್ವನಾಥ್ ಕಳೆದ 5 ವರ್ಷಗಳಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ 26 ಅಭಿವೃದ್ಧಿ ಕಾರ್ಯಕ್ರಮಗಳನ್ನು 5,600 ಕೋಟಿ ವೆಚ್ಚದಲ್ಲಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿಲ್ಲ. ಇದರಲ್ಲಿ ವಿಮಾನ ನಿಲ್ದಾಣದ ಕಾರ್ಯವೂ ಸೇರಿದೆ ಎಂದರು.
ನಂತರ ಬಿಜೆಪಿ ಪರ ಮಾತನಾಡಿದ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ನಗರಕ್ಕೆ ವಿಮಾನ ನಿಲ್ದಾಣ ತರುವಲ್ಲಿ ಆಗ ಸಂಸದರಾಗಿದ್ದ ಸಿ.ಎಚ್. ವಿಜಯಶಂಕರ್ ಕಾರಣ ಎಂದರು.
ಮಾತ್ರವಲ್ಲ, ಕಳೆದ 10 ವರ್ಷಗಳಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರ ದೇಶ ತಲೆ ತಗ್ಗಿಸುವ ಕೆಲಸ ಮಾಡಿದೆ ಎಂದರು.
ಬೇರೆ ಕಡೆ ಹೊರಟ ಮಾತು: ಈ ಮಾತಿನಿಂದ ಕುಪಿತರಾದ ಎಂ.ಲಕ್ಷ್ಮಣ್ ಎದ್ದು ನಿಂತು. ನಾನು ಬಿಜೆಪಿ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಎಪಿ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಪರ ಮಾತು ಆರಂಭಿಸಿದ ವಿದ್ಯಾರಣ್ಯ ಅವರು, ಪ್ರಣಾಳಿಕೆಯ ಪತ್ರವನ್ನು ಇಂಗ್ಲಿಷ್ನಲ್ಲಿ ಓದಲು ಪ್ರಾರಂಭಿಸಿದಾಗ, ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷ ಸ.ರ. ಸುದರ್ಶನ್, ನಿಮ್ಮ ಪಕ್ಷ ಜನಸಾಮಾನ್ಯರ ಪಕ್ಷ ಎಂದು ಹೇಳುತ್ತೀರಿ.
ಆದರೆ ಸಾಮಾನ್ಯ ಜನರಿಗೆ ಅರ್ಥವಾಗದ ಭಾಷೆಯಲಿ ಮಾತನಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.