'ಕೈ'- ಕಮಲದಿಂದ ಗುಲಾಮಗಿರಿ ಜೀವಂತ: ಶಿವಮಲ್ಲು ಆರೋಪ
ಟಿ. ನರಸೀಪುರ: ಜನರು ಕೈ ಚಾಚಿ ಬೇಡುವಂತಹ ಗುಲಾಮಗಿರಿಯನ್ನು 60 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಇನ್ನೂ ಜೀವಂತವಾಗಿಟ್ಟಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎನ್. ಶಿವಮಲ್ಲು ಹೇಳಿದರು.
ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಗುಲಾಮಗಿರಿ ಕಾರ್ಖಾನೆಯಾಗಿದ್ದರೆ, ಕೋಮುವಾದವನ್ನು ಬಿತ್ತುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಡೋಂಗಿತನದ ರಾಜಕಾರಣ ಪ್ರದರ್ಶಿಸಲು ಮುಂದಾಗಿದೆ ಎಂದು ತಿಳಿಸಿದರು.
ಬಿಎಸ್ಪಿ ಬ್ಲಾಕ್ ಅಧ್ಯಕ್ಷ ಬಿ.ಆರ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಬಿ. ಮಹದೇವಸ್ವಾಮಿ, ಮುಖಂಡರಾದ ಮಹದೇವಸ್ವಾಮಿ, ನಾರಾಯಣಸ್ವಾಮಿ, ಮೂಗೂರು ಆನಂದ್, ಮೂರ್ತಿ, ಟಿ.ಎಚ್. ಶಿವಕುಮಾರ್ ಇದ್ದರು.
ಸಾಮಾಜಿಕ ನ್ಯಾಯಕ್ಕಾಗಿ 'ಕೈ' ಬಲಪಡಿಸಿ: ಜಿಪಂ ಸದಸ್ಯ ಸುಧಾ
ಟಿ. ನರಸೀಪುರ: ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಎಂಬುದು ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿ, ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕೆಂದು ಮೂಗೂರು ಜಿಪಂ ಕ್ಷೇತ್ರದ ಸದಸ್ಯೆ ಎಂ. ಸುಧಾ ಮಹದೇವಯ್ಯ ಹೇಳಿದರು.
ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಗರ್ಗೇಶ್ವರಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ, ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರು ಹಾಗೂ ದುರ್ಬಲ ವರ್ಗಗಳ ರಾಜಕೀಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ನೀಡಿರುವುದರಿಂದ ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬನ್ನೂರು ಪುರಸಭೆ ಸದಸ್ಯೆ, ವಕೀಲೆ ಬಿ.ಕೆ. ಸುಮಿತ್ರಾ, ಮುಖಂಡರಾದ ಪ್ರಮೋದ್, ಮಹೇಶ್, ಎಸ್.ಎನ್. ನಟೇಶ್, ಜಗದೀಶ, ನಾಗರಾಜು, ಮೂರ್ತಿ, ಗುರುಸ್ವಾಮಿ, ಗೌಡ್ರು ಶಿವಮಲ್ಲು, ಟಿ.ಎಸ್. ಮಹೇಶ್, ಗುರುಸ್ವಾಮಿ ಮತ್ತಿತರರು ಇದ್ದರು.