ಪ್ರಮೋದಾದೇವಿ ಭೇಟಿಯಾದ ವಿಶ್ವನಾಥ್, ಪ್ರತಾಪ್ಸಿಂಹ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಬುಧವಾರ ಮೈಸೂರು ಅರಮನೆಗೆ ತೆರಳಿ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಪ್ರಮೋದ ದೇವಿ ಒಡೆಯರ್ ಅವರ ಆಶೀರ್ವಾದ ಪಡೆದು ಈ ಬಾರಿಯ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ವೇಳೆ ಪತ್ನಿ ಅರ್ಪಿತಾ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್ ಇದ್ದರು. ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರು ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಮತಯಾಚಿಸಿದರು. ಈ ವೇಳೆ ಶಾಸಕರಾದ ವಾಸು, ತನ್ವೀರ್ಸೇಠ್, ಕಾಂಗ್ರೆಸ್ ಮುಖಂಡ ಆರ್. ಮೂರ್ತಿ ಇದ್ದರು.
ಎಚ್ವಿ ರಾಜೀವ್ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ಅಡ್ಡಿ
ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಕೆಜೆಪಿಯಿಂದ ಬಂದವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜೆ.ಪಿ. ನಗರದಲ್ಲಿ ಬುಧವಾರ ನಡೆದಿದೆ. ಬಿಜೆಪಿ ಜೊತೆ ಕೆಜೆಪಿ ವಿಲೀನವಾಗಿದ್ದರೂ ಮಾನಸಿಕವಾಗಿ ಅದನ್ನು ಒಪ್ಪಿಕೊಳ್ಳಲು ಸ್ಥಳೀಯ ಕಾರ್ಯಕರ್ತರು ಸಿದ್ಧರಿಲ್ಲ ಎಂಬ ಸಂದೇಶವನ್ನು ಈ ಘಟನೆ ಪಕ್ಷದ ಮುಖಂಡರಿಗೆ ರವಾನಿಸಿದೆ. ಬುಧವಾರ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮುಖಂಡರಾದ ಎಚ್.ವಿ. ರಾಜೀವ್ ಹಾಗೂ ಯು.ಎಸ್. ಶೇಖರ್ ಬೆಂಬಲಿಗರು ಜೆ.ಪಿ. ನಗರದಲ್ಲಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಪ್ರಚಾರ ಕೈಗೊಳ್ಳಲಾಗಿದೆ. ನಾವು ಯಾವುದೆ ಕಾರಣಕ್ಕೂ ಪ್ರಚಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದರು.