ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ

Srinivasa Murthy VN
Updated On : 10 Apr 2014, 1:09 am

ಪಿರಿಯಾಪಟ್ಟಣ: ತಾಲೂಕಿನ ಹಲವೆಡೆ ಮಂಗಳವಾರ ರಾತ್ರಿ ಬಿದ್ದ ಗಾಳಿ ಸಮೇತ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ನೆಲಕ್ಕುರುಳಿವೆ. ತಾಲೂಕಿನ ಕಂಠಾಪುರ ಗ್ರಾಮದ ಬಳಿ ವಿದ್ಯುತ್‌ಕಂಬ ಮುರಿದುಬಿದ್ದಿದೆ. ಬೃಹತ್ ಮರವೊಂದು ಬಸವೇಶ್ವರ ದೇವಸ್ಥಾನದ ಮೇಲೆ ಬಿದ್ದು ದೇವಸ್ಥಾನ ಖಜಂಗೊಂಡಿದೆ.  

'ಪರಿಸರ ಸ್ವಚ್ಛವಾಗಿಡಿ'
ಪಿರಿಯಾಪಟ್ಟಣ: ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ವೈದ್ಯ ಡಾ. ರವಿಕುಮಾರ್ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಬೇಸಿಗೆ ಕಾಲವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ರೋಗ ಬಂದಾಗ ಆಸ್ಪತ್ರೆಗೆ ಬರುವ ಬದಲು ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಆರೋಗ್ಯ ಸಹಾಯಕ ಜಿ.ವಿ. ಶ್ರೀನಾಥ್, ಡೆಂಘಿ, ಚಿಕನ್ ಗುನ್ಯಾ, ಕಾಲರಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು.  ಸಿಬ್ಬಂದಿ ವರ್ಗದ ಸಿ.ಎಸ್. ಗೀತಾ ಇದ್ದರು.

ಹುಲಿ ಮರಿ ಶವ ಪತ್ತೆ
ಎಚ್.ಡಿ. ಕೋಟೆ: ಸುಮಾರು ಒಂದು ವರ್ಷದ ಹುಲಿ ಮರಿಯ ಕೊಳೆತ ಶವ ನಾಗರಹೊಳೆ ಅರಣ್ಯದ ಡಿ.ಬಿ. ಕುಪ್ಪೆ ವ್ಯಾಪ್ತಿಯ ಬಳ್ಳೆಗಸ್ತುನಲ್ಲಿ ಪತ್ತೆಯಾಗಿದೆ. 10 ದಿನಗಳ ಹಿಂದೆ ಈ ಹುಲಿ ಮರಿ ಮೃತಪಟ್ಟಿದೆ ಎಂದು ಹೇಳಲಾಗಿದೆ. ಇತರೆ ಪ್ರಾಣಿಗಳು ಅರ್ಧಭಾಗ ತಿಂದು ಹಾಕಿದ್ದು, ಸ್ಥಳಕ್ಕೆ ಎಸಿಎಫ್ ಲಿಂಗರಾಜು, ಆರ್‌ಎಫ್‌ಒ ಸತೀಶ್ ಭೇಟಿ ನೀಡಿದ್ದರು. ಗುರುವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಬಿಜೆಪಿಗೆ ನೇಮಕ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಎ.ಪಿ. ಚಂದ್ರ ಅವರನ್ನು ಅಂತರಸಂತೆ ಗ್ರಾಪಂ ವ್ಯಾಪ್ತಿಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್ ನೇಮಕ
ಮೈಸೂರು: ಲೋಕಸಭಾ ಚುನಾವಣೆಯ ವೀಕ್ಷಕರನ್ನಾಗಿ ಚಾಮರಾಜ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸೈಯದ್ ಖಾದರ್, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಲಾಭಕ್ಷ್, ಡಿಸಿಸಿ ಕಾರ್ಯದರ್ಶಿ ಖದೀರ್ ಅಹಮದ್ ಹಾಗೂ ಅಲ್ಪಸಂಖ್ಯಾತರ ವಿಭಾಗದ ಪತ್ರಿಕಾ ಕಾರ್ಯದರ್ಶಿಯಾಗಿ ಮಿರ್ಜಾ ಜಂಷೀದ್ ಬೇಗ್ ಅವರನ್ನು ಮರು ನೇಮಕ ಮಾಡಲಾಗಿದೆ.

ಜೆಡಿಎಸ್ ಖಂಡನೆ
ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಜಿ.ವಿ. ಸೀತಾರಾಂ ಹೇಳಿಕೆಯನ್ನು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ಸಿ. ನಾಗರಾಜು ಖಂಡಿಸಿದ್ದಾರೆ. ಚಿಕ್ಕಮಾದು ಅವರು ತಾಲೂಕಿನಾದ್ಯಂತ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸದ ಸೀತಾರಾಮ್ ಚುನಾವಣೆ ಸಂದರ್ಭದಲ್ಲಿ ಭೋವಿ ಜನಾಂಗವನ್ನು ನೆನಪು ಮಾಡಿಕೊಂಡು ವೃಥಾ ಆರೋಪ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಜನಾಂಗದವರನ್ನು ಮರೆಯುತ್ತಾರೆ. ಭೋವಿ ಜನಾಂಗಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಇವರೆ ಕಬಳಿಸುತ್ತಿದ್ದಾರೆ. ಆದ್ದರಿಂದ ಇವರ ಮಾತಿಗೆ ಬೆಲೆ ನೀಡದಂತೆ ಅವರು ಮನವಿ ಮಾಡಿದ್ದಾರೆ.   ಇಂತಹವರ ಹೇಳಿಕೆಗೆ ತಲೆಕೆಡಿಸಿಕೊಳ್ಳದೆ ತಾಲೂಕಿನ ಭೋವಿ ಜನಾಂಗದವರು ಜೆಡಿಎಸ್ ಅಭ್ಯರ್ಥಿ ಎಂ. ಶಿವಣ್ಣಗೆ ಹೆಚ್ಚಿನ ಮತ ನೀಡುವಂತೆ ಕೋರಿದ್ದಾರೆ.

ಫಲಕ ಗೊಂದಲ
ಮೈಸೂರು: ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂಬ ರಾಜ್ಯ ಸರ್ಕಾರದ ಕಾನೂನನ್ನು ಹೈಕೋರ್ಟ್ ತಾಂತ್ರಿಕ ಕಾರಣದ ಮೇಲೆ ಅನೂರ್ಜಿತಗೊಳಿಸಿರುವುದಕ್ಕೆ ಕನ್ನಡ ಕ್ರಿಯಾ ಸಮಿತಿ ಧ್ಯಕ್ಷ ಪ.ಮಲ್ಲೇಶ್, ಉಪಾಧ್ಯಕ್ಷ ಎಂ.ಬಿ. ವಿಶ್ವನಾಥ್, ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಭಾಷೆಯ ಬೆಳವಣಿಗೆಗೆ ಬದ್ಧವಾದ ನಿಮ್ಮ ಸರ್ಕಾರ ಕೂಡಲೇ ಅಗತ್ಯವಾದ ಹೊಸ ಮಸೂದೆಯನ್ನು ಜಾರಿಗೆ ತಂದು, ಕನ್ನಡ ಉಳಿಸಿ, ಬೆಳೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.

ವಿದ್ಯಾರ್ಥಿ ವೇತನ
ಮೈಸೂರು: ಬೆಂಗಳೂರಿನ ಡಿಎಸ್‌ಇಆರ್‌ಟಿ ನಡೆಸಿದ ರಾಜ್ಯ ಮಟ್ಟದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‌ಎಂಎಂಎಸ್) ಪರೀಕ್ಷೆಯಲ್ಲಿ ಸರಸ್ವತಿಪುರಂ ಜೆಎಸ್‌ಎಸ್ ಪ್ರೌಢಶಾಲೆಯ 10 ವಿದ್ಯಾರ್ಥಿಗಳು ಉತ್ತಮ ಸಾಧನೈಗೈದು ಮಾಹೆಯಾನ ರು. 500 ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement