ಆಹಾರ ಭದ್ರತೆ ನೀಡಿದ ಕೈಗೆ ಮತ ನೀಡಿ
ಕೆ.ಆರ್. ನಗರ: ಬಡತನ ಮುಕ್ತ ಭಾರತ ನಿರ್ಮಾಣಕ್ಕಾಗಿ ದೇಶದ ಬಡಜನತೆಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ನೀಡುತ್ತಿರುವ ಕಾಂಗ್ರೆಸ್ಗೆ ಮತ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ವತಿಯಿಂದ ಸಂಸದೆ, ಅಭ್ಯರ್ಥಿ ರಮ್ಯಾ ಪರ ಪಾದಯಾತ್ರೆ ಮೂಲಕ ನಡೆಸುತ್ತಿರುವ ಪ್ರಚಾರಕ್ಕೆ ಪಟ್ಟಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದು ಆಡಳಿತಾತ್ಮಕ ಸಬಲೀಕರಣಕ್ಕಾಗಿ ಜನ ಸಾಮಾನ್ಯರಿಗೆ ಮಾಹಿತಿ ಅಧಿಕಾರ ನೀಡಿದೆ. ಇದರಿಂದ ಭ್ರಷ್ಟಾಚಾರ ತಂದು ಆಡಳಿತದ ಪಾರದರ್ಶಕತೆಯನ್ನು ದೇಶದ ಪ್ರತಿಯೊಬ್ಬ ಪ್ರಜೆಯು ದಾಖಲೆಯ ಮೂಲಕವೇ ತಿಳಿಯಲು ಸಾಧ್ಯವಾಗಿದೆ ಎಂದರು.
ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಜನಪರ ಮತ್ತು ಅಭಿವೃದ್ಧಿ ಪರವಾದ ಕಾರ್ಯಕ್ರಮಗಳ ಜತೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡಜನತೆ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು ಅನ್ನಭಾಗ್ಯ ಕ್ಷೀರಭಾಗ್ಯ, ಸೇರಿದಂತೆ ಇತರೆ ಗ್ರಾಮೀಣ ಪರ ಯೋಜನೆಗಳ ಮೂಲಕ ಜನರ ಬದುಕನ್ನು ಹಸನಾಗಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಬಿ.ಎಲ್. ರಾಜಶೇಖರ್, ಜಿಪಂ ಮಾಜಿ ಸದಸ್ಯರಾದ ಜಯರಾಮೇಗೌಡ, ಡಿ.ರವಿಶಂಕರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಸಿ.ಎಂ. ದ್ಯಾವಪ್ಪ, ಪದಾಧಿಕಾರಿಗಳಾದ ಎಂ.ಬಿ. ರಾಮೇಗೌಡ, ಶಿವರಾಮು, ನಾಗೇಶ್, ಕರಿಯಪ್ಪ, ಮುಖಂಡರಾದ ಡಾ. ಮೆಹಬೂಬ್ ಖಾನ್, ಎಸ್. ಸಿದ್ದೇಗೌಡ, ಶಿವಾಜಿಗಣೇಶನ್, ಗುರುಶಂಕರ್, ಮೋಹನ್ರಾವ್ ಇದ್ದರು.
ರಮ್ಯಾ ಗೆಲವಿಗೆ ಸಹಕರಿಸುವಂತೆ ಮನವಿ
ಕೆ.ಆರ್. ನಗರ: ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಜೆಡಿಎಸ್ ಮತ್ತು 5 ವರ್ಷದ ಅವಧಿಯಲ್ಲಿ ಭ್ರಷ್ಟಚಾರದ ಕೂಪದಲ್ಲೇ ಮುಳುಗಿ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ದ ಬಿಜೆಪಿಯನ್ನು ದೂರವಿಟ್ಟು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರನ್ನು ಆಶೀರ್ವದಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್ ಮನವಿ ಮಾಡಿದರು.
ಚುಂಚನಕಟ್ಟೆ ಹೋಬಳಿ ದಿಡ್ಡಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ಪರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇರುವುದರಿಂದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ 10 ತಿಂಗಳ ಅವಧಿಯಲ್ಲಿ ಹಲವಾರು ಜನಪರ ಮತ್ತು ರೈತಪರ ಕೆಲಸ ಮಾಡಿರುವ ಮುಖ್ಯಮಂತ್ರಿ ಸಿದ್ದರಾಛಮಯ್ಯನವರ ಕೈ ಬಲಪಡಿಸಬೇಕೆಂದರು.
ಏ.15ಕ್ಕೆ ಸಿಎಂ ನಗರಕ್ಕೆ: ಅಭ್ಯರ್ಥಿ ರಮ್ಯಾ ಅವರ ಪರ ಪ್ರಚಾರ ನಡೆಸಲು ಏ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಆರ್. ನಗರಕ್ಕೆ ಆಗಮಿಸುವರು ಎಂದರು. ಮುಖಂಡರಾದ ಅರುಣ್ಕುಮಾರ್ ಮಹೇಶ್, ಯೋಗೀಶ್, ಭಾಸ್ಕರ್, ನಿಂಗರಾಜ, ಕುಮಾರ್, ಪವನ್, ಮದನ್, ಪ್ರತಾಪ, ಆಕಾಶ್ ಇದ್ದರು.