ಕಾಂಗ್ರೆಸ್ ಬೆಂಬಲಿಸಲು ಮನವಿ
ಮೈಸೂರು: ಮೈಸೂರು- ಕೊಡಗು, ಮಂಡ್ಯ ಹಾಗೂ ಚಾಮರಾಜನಗರದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಲ್.ಎಚ್. ಬಾಲಕೃಷ್ಣ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ ಕಾಲಗಳಲ್ಲೂ ದೀನದಲಿತರ, ಹಿಂದುಳಿದ ಮತ್ತು ಎಲ್ಲ ಜನಾಂಗದ ಬಡವರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಎಲ್ಲ ಪಕ್ಷಗಳಿಗಿಂತಲೂ ಒಂದು ಉತ್ತಮ ಪ್ರಗತಿಪರ ರಾಷ್ಟ್ರೀಯ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಡಾ.ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿರುವ ಬಗ್ಗೆ ದಲಿತರಿಗೆ ಅಸಮಾಧಾನ ಇರುವುದು ನಿಜ. ಅವರು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲವಿಗೆ ಪ್ರಾಮುಖ್ಯತೆ ನೀಡದೆ ಪಕ್ಷವನ್ನು ಗೆಲ್ಲಿಸಿ, ಅಧಿಕಾರ ತಂದುಕೊಟ್ಟಿದ್ದಾರೆ. ಇದು ಶೀಘ್ರದಲ್ಲಿಯೇ ಪರಿಹಾರವಾಗಲೇಬೇಕೆಂದು ಅವರು ಆಶಿಸಿದ್ದಾರೆ.
ದರ್ಶನ್ ರೋಡ್ ಶೋ ಇಂದು
ಮೈಸೂರು: ಮೈಸೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಲನಚಿತ್ರ ನಟ ದರ್ಶನ್ ತೂಗುದೀಪ್ ಏ.11 ರಂದು ರೋಡ್ ಶೋ ನಡೆಸುವರು. ಬೆಳಗ್ಗೆ 10.30ಕ್ಕೆ ಬಲ್ಲಾಳ್ ವೃತ್ತ ಸಮೀಪದ ಎಸ್‌ಡಿಎಂ ಮಹಿಳಾ ಕಾಲೇಜು ಬಳಿಯಿಂದ ರೋಡ್ ಶೋ ಆರಂಭಿಸುವ ದರ್ಶನ್, ರಾಮಸ್ವಾಮಿ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮೂಲಕ ಹುಣಸೂರು ರಸ್ತೆಯಲ್ಲಿ ರೋಡ್ ಶೋ ಅಂತ್ಯಗೊಳಿಸುವರು. ಬೆಳಗ್ಗೆ 11.30ಕ್ಕೆ ಬಿಳಿಕೆರೆ, ಮಧ್ಯಾಹ್ನ 1ಕ್ಕೆ ಹುಣಸೂರು, ಮಧ್ಯಾಹ್ನ 3ಕ್ಕೆ ಪಿರಿಯಾಪಟ್ಟಣ, ಮಧ್ಯಾಹ್ನ 3.30ಕ್ಕೆ ಕುಶಾಲನಗರ, ಸಂಜೆ 4.30ಕ್ಕೆ ಸೋಮವಾರಪೇಟೆ, ಸಂಜೆ 6ಕ್ಕೆ ಮಡಿಕೇರಿಯಲ್ಲಿ ರೋಡ್ ಶೋ ನಡೆಸುವುದಾಗಿ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ಏಜೆಂಟ್ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.
ರಜಾ ದಿನದಲ್ಲೂ ಮೃಗಾಲಯ ಓಪನ್
ಮೈಸೂರು: ಸರ್ಕಾರಿ ರಜೆ ಹಾಗೂ ವಾರದ ರಜೆ ಇದ್ದರೂ ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಮೃಗಾಲಯ ವೀಕ್ಷಿಸಲು ಅನುಕೂಲವಾಗುವಂತೆ ಏ.13, 14 ಹಾಗೂ ಏ.15 ರಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳಿದ್ದಾರೆ.
ರಾಜ್ಯಮಟ್ಟದ ಫುಟ್ಬಾಲ್
ಮೈಸೂರು: ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಜನಸೇವಾ ಸಂಘದ ವತಿಯಿಂದ ಏ.18 ರಿಂದ 21 ರವರೆಗೆ ಪ್ರಥಮ ವರ್ಷದ ಪುರುಷರ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಪಾಲಿಬೆಟ್ಟದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ಆಸಕ್ತ ತಂಡಗಳು ಹೆಸರು ನೋಂದಾಯಿಸಲು ಏ.12 ಕಡೆ ದಿನ. ಹೆಚ್ಚಿನ ಮಾಹಿತಿಗಾಗಿ ಎಚ್.ಇ. ಬಸವರಾಜು, ಮೊ. 9449476332, ಶಶಿ, ಮೊ. 9482948477 ಸಂಪರ್ಕಿಸಿ.
ಪುಸ್ತಕ ನಿಷೇಧಿಸಿ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಬರೆದಿರುವ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ವೀರನಾ ಎಂಬ ಕೃತಿಯನ್ನು ನಿಷೇಧಿಸುವಂತೆ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್ ಆಫ್ ಇಂಡಿಯಾ ಆಗ್ರಹಿಸಿದೆ. ಭಾರತದಲ್ಲಿ ಜಾತ್ಯತೀತ ಮನೋಭಾವನೆಯಿಂದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹಾಗೂ ಜೈನರು ಸೇರಿದಂತೆ ಎಲ್ಲಾ ಧರ್ಮಿಯರು ಸಮನ್ವಯ ಹಾಗೂ ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ. ಆದರೆ ಇತಿಹಾಸ ಬರೆಯುವ ನೆಪದಲ್ಲಿ ಪ್ರತಾಪ ಸಿಂಹರು, ಟಿಪ್ಪು ಸುಲ್ತಾನರನ್ನು ಹೇಡಿಯಾಗಿ ಚಿತ್ರಿಸಿರುವುದು ಮುಸ್ಲಿಂ ಸಮುದಾಯವರ ಮನಸ್ಸುಗಳಿಗೆ ನೋವುಂಟು ಮಾಡಿದೆ ಎಂದು ವೇದಿಕೆ ಮುಖಂಡ ಫಯಾಜ್ ಅಹಮದ್ ಖಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಮಳೆ
ಮೈಸೂರು: ಮೈಸೂರಿನಲ್ಲಿ ಗುರುವಾರ ಸಂಜೆ ಮಳೆ ಬಿದ್ದಿತು. ಜೋರು ಮಳೆ ಆರಂಭವಾಯಿತಾದರೂ ಸ್ವಲ್ಪ ಹೊತ್ತಿನ ನಂತರ ಕಡಿಮೆಯಾಯಿತು. ಎರಡು ದಿನಗಳ ಹಿಂದೆ ಕೂಡ ನಗರದಲ್ಲಿ ಸಾಧಾರಣ ಮಳೆಯಾಗಿದ್ದರೆ ಜಿಲ್ಲೆಯ ಎಚ್.ಡಿ. ಕೋಟೆ, ಕೆ.ಆರ್. ನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿತ್ತು.
ನೇಮಕ ರ್ಯಾಲಿ
ಮೈಸೂರು: ಭಾರತೀಯ ವಾಯುದಳದಲ್ಲಿ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಗ್ರೂಪ್-ವೈ (ಅದರಲ್ಲಿ ಆಟೋಮೋಬೈಲ್ ಟೆಕ್ನೀಷಿಯನ್, ಗ್ರೌಂಡ್ ಟ್ರೈನಿಂಗ್ ಇಸ್ಟ್ರಕ್ಟರ್ (ಜಿಟಿಐ), ಭಾರತೀಯ ವಾಯು ದಳದ ಪೊಲೀಸ್) ಟ್ರೇಡ್‌ಗಳಲ್ಲಿ ನೇಮಕಾತಿ ರ್ಯಾಲಿಯು ಏ.20 ರಿಂದ 26ರವರೆಗೆ ನಂ.7 ಏರಮನ್ ಸೆಲೆಕ್ಷನ್ ಸೆಂಟರ್, 1 ಕಬ್ಬನ್ ರೋಡ್ ಬೆಂಗಳೂರಲ್ಲಿ ನಡೆಯಲಿದೆ. ಮೈಸೂರಿನ ಅಭ್ಯರ್ಥಿಗಳು ಏ.24 ಹಾಗೂ 25ರಂದು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಿ.ವಿಶ್ವನಾಥ, ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಪರ್ಕಿಸಿ. ದೂ. 2489972 ಅಥವಾ 080-25592199 ಸಂಪರ್ಕಿಸಬಹುದು. ಇ ಮೇಲ್ www.indianairforce.nic.in ನಲ್ಲಿ ಮಾಹಿತಿ ಪಡೆಯಬಹುದು.