ಕಾಂಗ್ರೆಸ್ ಹಿಂದುಳಿದವರಿಗೆ ಏನು ಮಾಡಿಲ್ಲ
ಪಿರಿಯಾಪಟ್ಟಣ: ಕಳೆದ 55 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರಿಗೆ ಏನೂ ಮಾಡಿಲ್ಲ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಲೋಕಸಭೆಗೆ ಆಯ್ಕೆಯಾಗದಂತೆ ಸೋಲಿಸಿದ್ದು ಕಾಂಗ್ರೆಸ್ಸಿಗರು. ಪ್ರತಿಭಾವಂತ ದಲಿತ ಮುಖಂಡರೊಬ್ಬರು ಅಸೆಂಬ್ಲಿಗೆ ಆಯ್ಕೆಯಾಗಬಾರದೆಂಬ ಧೋರಣೆ ಹೊಂದಿದ್ದ ಕಾಂಗ್ರೆಸ್ಸಿಗರು ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಗೆದ್ದುಬಂದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ದುಷ್ಟ ಶಕ್ತಿಗಳು ಪರಮೇಶ್ವರ್ ಅವರನ್ನು ಸೋಲಿಸಿದರು. ನಂತರ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂಬ ಕೂಗು ದಲಿತ ಸಮುದಾಯದಿಂದ ಕೇಳಿಬಂತಾದರೂ ಉಪ ಮುಖ್ಯಮಂತ್ರಿ ಹೋಗಲಿ ಮಂತ್ರಿಯನ್ನೂ ಮಾಡಲಿಲ್ಲ ಎಂದು ದೂರಿದರು.
ಯಾವ ಯೋಜನೆ ರೂಪಿಸಲಿಲ್ಲ: ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಂದಿಗೂ ಜಾತಿ ಹೆಸರಿನಲ್ಲಿ ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ಪ್ರವಾಸ ಕಾರ್ಯಕ್ರಮದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸುವ ಮೂಲಕ ಮಕ್ಕಳ ಮನಸ್ಸನ್ನು ಒಡೆಯಿತು. ಶಾದಿ ಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಜಾತಿ ಬೀಜವನ್ನು ಬಿತ್ತುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡಿತು. ಬಿಜೆಪಿ ಬ್ರಾಹ್ಮಣರ ಪಕ್ಷ ಎಂದು ಹೇಳುತ್ತಿರುವವರು ಅರ್ಥಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೇದಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ಗೌಡ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಎಂ. ರಾಜೇಗೌಡ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಸವರಾಜು, ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್, ಉಪಾಧ್ಯಕ್ಷ ಟಿ.ರಮೇಶ್, ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್, ಮುಖಂಡರಾದ ಎಚ್.ಡಿ. ಗಣೇಶ್, ಬಿ.ಎಸ್. ರಾಮಚಂದ್ರು, ಪಿ.ಜೆ. ರವಿ, ಉಮೇಶ್ ಇದ್ದರು.