ಚುನಾವಣೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಮತಗಟ್ಟೆ ಸಿಬ್ಬಂದಿ ತೆರಳಲು ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆ ಸಿಬ್ಬಂದಿ ಏ.16ರ ಬೆಳಗ್ಗೆ 6ಕ್ಕೆ ಹಾಜರಾಗಿ, ವಾಹನ ಸೌಲಭ್ಯ ಪಡೆದುಕೊಳ್ಳಬೇಕು. ಬಸ್ಸುಗಳು 6.30ಕ್ಕೆ ಹೊರಡುವುದರಿಂದ ಮತಗಟ್ಟೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ವಿಳಂಬವಾದರೆ ಸ್ವಂತ ವ್ಯವಸ್ಥೆ ಮಾಡಿಕೊಂಡು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕು.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಹೊರಡುವವರು ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಹೊರಡುವವರು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು ಕ್ಷೇತ್ರದಿಂದ ಹೊರಡುವವರು ಹುಣಸೂರು ಪುರಸಭೆ ಮೈದಾನದಿಂದ, ಎಚ್.ಡಿ. ಕೋಟೆಯಿಂದ ಹೊರಡುವವರು ಕೋಟೆಯ ಸೇಂಟ್ ಮೇರೀಸ್ ಪ್ರೌಢಶಾಲೆ, ನಂಜನಗೂಡಿನಿಂದ ಹೊರಡುವವರು ನಂಜನಗೂಡಿನ ಬಾಲಕರ ಪದವಿ ಕಾಲೇಜು ಮೈದಾನದಿಂದ ಹೊರಡಬೇಕು.
ಚಾಮುಂಡೇಶ್ವರಿ ಕ್ಷೇತ್ರದಿಂದ ಹೊರಡುವವರು ಗ್ರಾಮಾಂತರ ಬಸ್ ನಿಲ್ದಾಣದ ಪೀಪಲ್ಸ್ ಪಾರ್ಕ್ ಪದವಿ ಪೂರ್ವ ಕಾಲೇಜು, ಕೃಷ್ಣರಾಜ ಕ್ಷೇತ್ರದಿಂದ ಹೊರಡುವವರು ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜು, ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಹೊರಡುವವರು ಮಹಾರಾಜ ಪಪೂ ಕಾಲೇಜು, ನರಸಿಂಹರಾಜ ಕ್ಷೇತ್ರದವರು ಬೇಡನ್ ಪೋವೆಲ್ ಪಬ್ಲಿಕ್ ಶಾಲೆ, ಟಿ.ನರಸೀಪುರ ಕ್ಷೇತ್ರದವರು ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಿಂದ ಹೊರಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಎಲ್ಲಾ ಕ್ಷೇತ್ರಗಳಿಗೂ 323 ಬಸ್‌ಗಳ ಅಗತ್ಯವಿದ್ದು, ಬೇರೆ ಕ್ಷೇತ್ರಕ್ಕೆ 137 ಬಸ್‌ಗಳು ಹೋಗಬೇಕು. ಮಸ್ಟರಿಂಗ್ ಸ್ಥಳದಲ್ಲಿ 185 ಬಸ್‌ಗಳು ಉಳಿಯಲಿವೆ.