ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೌರ ಕಾರ್ಮಿಕರು ಶಿಕ್ಷಣ ವಂಚಿತ: ದುರಂತ

Srinivasa Murthy VN
Updated On : 11 Apr 2014, 12:22 pm

ಹುಣಸೂರು: ರಾಜ್ಯದ ಪೌರಕಾರ್ಮಿಕ ಸಮುದಾಯದ ಬಹುತೇಕ ಮಂದಿ ಶಿಕ್ಷಣದಿಂದ ವಂಚಿತರಾಗಿರುವುದು ಆಧುನಿಕ ಸಮಾಜದ ದುರಂತವೆಂದು ಮಾಜಿ ಮೇಯರ್ ನಾರಾಯಣ ವಿಷಾದಿಸಿದರು.
ಪಟ್ಟಣದ ಪೌರಕಾರ್ಮಿಕರ ಸಂಘ ಹಾಗೂ ಪೌರಕಾರ್ಮಿಕರ ಗುತ್ತಿಗೆದಾರರ ಸಂಘದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಲ್ಲಿಯವರೆಗಿನ ಸರ್ಕಾರಗಳು ಪೌರಕಾರ್ಮಿಕರ ಹೊರಗುತ್ತಿಗೆ ಪದ್ಧತಿಯನ್ನು ಅನುಸರಿಸುವ ಮೂಲಕ ಪರೋಕ್ಷವಾಗಿ ಜೀತ ಪದ್ಧತಿ ಜಾರಿಗೊಳಿಸಿದ್ದವು. ಆದರೆ ನ್ಯಾಯಾಲಯದಲ್ಲಿ ತಮ್ಮ 8 ವರ್ಷಗಳ ಹೋರಾಟದ ಫಲವಾಗಿ ಕಳೆದ ಮಾರ್ಚ್‌ನಲ್ಲಿ ಹೈಕೋರ್ಟ್ ನಮ್ಮ ಕೂಗಿಗೆ ಸ್ಪಂದಿಸಿ ಹೊರಗುತ್ತಿಗೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರವೂ ಇದಕ್ಕೆ ಒಪ್ಪಿಗೆ ಸೂಚಿಸಿ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಈಗ ಪೌರಕಾರ್ಮಿಕರು ಸ್ವತಂತ್ರರಾಗಿದ್ದಾರೆ. ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಭದ್ರತೆಯನ್ನೇ ಹೊಂದಿಲ್ಲದ ನಮ್ಮ ಸಮುದಾಯ ಇನ್ನು ಮುಂದೆ ಈ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿಯಬೇಕೆಂದು ಕರೆ ನೀಡಿದರು.
ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಪೌರಕಾರ್ಮಿಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊರಗುತ್ತಿಗೆಯಂತಹ ಪದ್ಧತಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಾಸಕನಾಗಿ ತಾಲೂಕಿನಲ್ಲಿರುವ ಈ ಸಮುದಾಯಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.
ಸಭೆಯಲ್ಲಿ ಪುರಸಭಾ ಸದಸ್ಯ ಲಕ್ಷ್ಮಣ್, ಡಾ.ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ, ಆದಿದ್ರಾವಿಡ ಯುವಕ ಸಂಘದ ಅಧ್ಯಕ್ಷ ನಾಗರಾಜ, ತಾಲೂಕು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಣ್ಣಾರಿ, ತಾಲೂಕು ಪೌರಕಾರ್ಮಿಕ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಚ್.ಸಿ.ಮಾದ, ಪುರಸಭೆಯ ಮಾಜಿ ಸದಸ್ಯ ಕಣ್ಣಯ್ಯ, ಮುಖಂಡರಾದ ನಾಗರಾಜ, ರಾಚ, ರಾಮು  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement