ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೂಡಣದತ್ತ ಹೊರಟ ಪಾತರಗಿತ್ತಿ ದಿಬ್ಬಣ

Srinivasa Murthy VN
Updated On : 11 Apr 2014, 12:21 pm

-ಜೆ. ಮಹದೇವ
ಮೈಸೂರು: ಮಳೆ ಬಿದ್ದು ದಿನ ಕಳೆದಿರಲಿಲ್ಲ. ಮುಂಜಾನೆಯ ಹೊತ್ತಲ್ಲಿ ನೆಲದ ಧಗೆ ಮುಸುಗುಡುತ್ತಿದ್ದರೆ, ಅದರ ಮೇಲ್ಮೈಯಲ್ಲಿ ಚೆಂಗಾಳಿಯ ಹಬೆ ಹಾಸುಹೊಕ್ಕಾಗಿತ್ತು. ಮೂಡಣದಿ ಸೂರ್ಯ ಪ್ರಖರತೆ ಬೀರಲು ಶುರು ಮಾಡಿದ್ದ. ಅಷ್ಟರಲ್ಲೆ ಗಿಡ, ಪೊದೆ, ಮರ ಹೀಗೆ ಹಸಿರ ವನರಾಶಿಯಿಂದ ಎದ್ದು ಬಂದ ಪಾತರಗಿತ್ತಿ ಎಲ್ಲಿಗೋ ಹೋಗುತ್ತಿದ್ದದ್ದು ಭಾಸವಾಯಿತು.
ಹೌದು. ಇಂತಹ ಸನ್ನಿವೇಶ ಕಾಣಿಸಿಕೊಂಡಿದ್ದು ಸಾಂಸ್ಕೃತಿಕ ಮೈಸೂರಿನಲ್ಲಿ. ಬೆಳ್ಳಂಬೆಳಗ್ಗೆಯ ಲಕ್ಷಾಂತರ ಸಂಖ್ಯೆಯಲ್ಲಿ ಕಾಣಿಸಿಕೊಂಡ ಚಿಟ್ಟೆಗಳ ಸಮೂಹ ರಸ್ತೆಯುದ್ದಕ್ಕೂ ಓಡಾಡುತ್ತಿದ್ದವರ ಮುಖಕ್ಕೆ ಚಟಪಟ ಅಂತ ಬಡಿಯುತ್ತಿದ್ದವು. ಎಷ್ಟು ದೂರ ಕ್ರಮಿಸಿದರೂ ಇವುಗಳ ಸಂವೇದನೆ ಕಣ್ಮರೆಯಾಗಲೇ ಇಲ್ಲ. ಇಷ್ಟು ದಿನ ಅಲ್ಲಿ ಇಲ್ಲಿ ನೋಡುತ್ತಿದ್ದ ಚಿಟ್ಟೆಗಳು ಹೀಗೆ ಒಂದಿಂದೊಮ್ಮೇಲೆ ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಉಂಟು ಮಾಡಿದವು.
ಈ ಬಗ್ಗೆ ಜೆಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಸಿದ್ದರಾಮಯ್ಯ ಅವರನ್ನು ವಿಚಾರಿಸಿದಾಗ, ಗುರುವಾರ ಕಾಣಿಸಿಕೊಂಡ ಚಿಟ್ಟೆಗಳ ಸಮೂಹ ಇದೇ ಹೊಸದೇನಲ್ಲ. ಪ್ರತಿ ವರ್ಷವೂ ಚಿಟ್ಟೆಗಳು ಒಂದು ಬಾರಿ ವಲಸೆ ಹೋಗುತ್ತವೆ. ಶಿವರಾತ್ರಿ ಕಳೆದ ಮೇಲೆ ಬಿದ್ದ ಮಳೆಗೆ ಹಸಿರೆಲೆಗಳು ಚಿಗುರಿವೆ. ಹೂವುಗಳ ವರ್ಣದಳ ಮಿಂಚುತ್ತಿವೆ. ಅದರಲ್ಲಿ ಮಕರಂದ ಹೀರಲು ಇಚ್ಛೆಪಡುವ ಚಿಟ್ಟೆಗಳಿಗೆ ಆಹಾರ ತಿನ್ನಲು ಇದೇ ಒಳ್ಳೆ ಸಮಯವಾಗಿತ್ತು.
ಆಹಾರ ಅರಸಿದ್ದವು: ಹಾಗಾಗಿಯೇ ಪಶ್ಚಿಮದಿಂದ ಪೂರ್ವದ ಕಡೆಗೆ ಚಿಟ್ಟೆಗಳು ವಲಸೆ ಹೊರಟಿದ್ದವು. ಈಗ ಕಾಣಿಸಿಕೊಂಡ ಚಿಟ್ಟೆಗಳಲ್ಲಿ ಕಡು ನೀಲಿ ಹುಲಿ, ನೀಲಿ ಹುಲಿ, ಪಾರದರ್ಶಕ ನೀಲಿ ಹುಲಿ, ಕಪ್ಪು ಕಾಗೆ ಚಿಟ್ಟೆಗಳ ಪ್ರಬೇಧಗಳು ಸೇರಿದ್ದವು. ಇವುಗಳ ಜೀವಿತಾವಧಿ ಎರಡು ವಾರಗಳು ಮಾತ್ರ. ಬದುಕಿರುವ ಕೆಲವೇ ದಿನಗಳಲ್ಲಿ ಸಂತೋಷವಾಗಿ ತಿಂದು ತೇಗಲು ಬಯಸುತ್ತವೆ. ಆದ್ದರಿಂದಲೇ ಅವು ಆಹಾರ ಅರಸಿ ವಲಸೆ ಹೋಗುತ್ತಿದ್ದವು.
ಮುಂದಿನ ಜುಲೈ- ಆಗಸ್ಟ್‌ನಲ್ಲಿ ಈಗ ಹೊರಟಿರುವ ಚಿಟ್ಟೆಗಳ ಸಂತತಿಗಳು ಪೂರ್ವದಿಂದ ಪಶ್ಚಿಮಕ್ಕೆ ವಲಸೆ ಬರುತ್ತವೆ. ಒಂದು ಅಂದಾಜಿನ ಪ್ರಕಾರ ಈ ಚಿಟ್ಟೆಗಳೆಲ್ಲ ಪಶ್ಚಿಮ ಘಟ್ಟ ಸೇರಬಹುದು ಎಂದು ವಿಜ್ಞಾನಿಗಳ ಊಹೆ. ಆದರೆ, ನಿಖರವಾಗಿ ಈವರೆಗೆ ಯಾವುದೇ ಸಮೀಕ್ಷೆ ನಡೆದಿಲ್ಲ. ಒಟ್ಟಿನಲ್ಲಿ ಪಶ್ಚಿಮ ಘಟ್ಟ ಸೇರಬಹುದು ಎಂದು ಮಾಹಿತಿ ನೀಡಿದರು.
ಅಮೆರಿಕದಲ್ಲೂ ವಲಸೆ: ಅಮೆರಿಕದಲ್ಲಿ ಚಳಿ ಹೆಚ್ಚಾದಾಗ ಚಿಟ್ಟೆಗಳಿಗೆ ಆಹಾರ ಕಡಿಮೆಯಾಗುತ್ತದೆ. ಮೆಕ್ಸಿಕೋದಿಂದ ಕೆನಡಾಗೆ ಸುಮಾರು 4 ಸಾವಿರ ಕಿ.ಮೀ. ದೂರ ಕ್ರಮಿಸುತ್ತವೆ ಚಿಟ್ಟೆಗಳು. ಅವುಗಳಲ್ಲಿ ಮೋನಾರ್ಕ್ ಎಂಬ ಪ್ರಬೇಧ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಅಮೆರಿಕದಲ್ಲಿ ಆದ ಹಿಮಪಾತದಿಂದ ಚಿಟ್ಟೆಗಳಿಗೆ ಗಂಡಾಂತರ ಉಂಟಾಗಿತ್ತು. ಆಗ ಅವು ಸಮಶೀತೋಷ್ಣವಲಯ ಹುಡುಕಿಕೊಂಡು ಹೋಗುತ್ತವೆ. ಅವುಗಳಿಗೆ ಪ್ರಶಸ್ತವಾದ ಸ್ಥಳವೇ ಕೆನಡಾ. ಈ ಬಗ್ಗೆ ಸಮೀಕ್ಷೆಯೇ ನಡೆದಿದೆ. ಭಾರತದಲ್ಲಿ ಮಾತ್ರ ಚಿಟ್ಟೆಗಳ ವಲಸೆ ಬಗ್ಗೆ ನಿಖರವಾದ ಸಮೀಕ್ಷೆ ನಡೆದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement