ಮೊಬೈಲ್ನಲ್ಲಿ ಮತದಾನ ಪ್ರಕ್ರಿಯೆ ಮಾಹಿತಿ
ಹುಣಸೂರು: ಎಸ್ಎಂಎಸ್ ಮೂಲಕ ಪ್ರತಿ ಬೂತ್ನಲ್ಲಿನ ಇಡೀ ಮತದಾನ ಪ್ರಕ್ರಿಯೆಯನ್ನು ಹಾಗೂ ಪ್ರತಿ ಎರಡು ಗಂಟೆಗೊಮ್ಮೆ ಮೊಬೈಲ್ ಮೂಲಕ ಮಾಹಿತಿ ಸಂಗ್ರಹಿಸುವ ಪದ್ಧತಿ ಈ ಬಾರಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜಗದೀಶ್ ಹೇಳಿದರು.
ಪಟ್ಟಣದ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕಿನ ಪ್ರತಿ ಮತಗಟ್ಟೆಯ ಪಿಆರ್ಒ ಹಾಗೂ ಸಿಬ್ಬಂದಿಗೆ ತರಬೇತಿ ನೀಡುವ ಮುಖ್ಯ ತರಬೇತುದಾರರು ಹಾಗೂ ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಥಮ ಬಾರಿಗೆ ಮತಗಟ್ಟೆ ತಲುಪಿದ ಕೂಡಲೇ, ಬೆಳಗ್ಗೆ ಮತದಾನದ ಆರಂಭಕ್ಕೂ ಮುನ್ನ ನಡೆಯುವ ಅಣಕು ಮತದಾನ, ಮತದಾನ ಆರಂಭ ಸೇರಿದಂತೆ ಪ್ರತಿ ಎರಡು ಗಂಟೆಗೊಮ್ಮೆ ನಡೆದಿರುವ ಮತದಾನದ ಮಾಹಿತಿಯನ್ನು ತಾಲೂಕು ಕೇಂದ್ರಕ್ಕೆ ಎಸ್ಎಂಎಸ್ ಮಾಡಬೇಕು. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ನಿಖರ ಮಾಹಿತಿ ನೀಡಬೇಕೆಂದು ಸೂಚಿಸಿದರು. ತಾಲೂಕಿನಲ್ಲಿ ವಿಳಾಸ ಬದಲಾವಣೆ, ಸ್ಥಳದಲ್ಲಿ ವಾಸವಿಲ್ಲದಿದ್ದರೂ ಮತಪಟ್ಟಿಯಲ್ಲಿ ಸೇರ್ಪಡೆಯಾಗಿರುವ 2,560 ಮಂದಿ ಗುರುತಿಸಲಾಗಿದ್ದು, ಮತದಾನದ ವೇಳೆ ಪರಿಶೀಲಿಸಿ ಮತ ಹಾಕಿಸಬೇಕು. ಒಂದು ವೇಳೆ ಜೀವಂತವಾಗಿದ್ದು, ಮತದಾರರ ಪಟ್ಟಿಯಲ್ಲಿ ನಿಧನ ಎಂದು ದಾಖಲಾಗಿದ್ದಲ್ಲಿ ಅಂತವರು ಮತಹಾಕಲು ಬಂದಲ್ಲಿ ಅವರಿಂದ ಡಿಕ್ಲರೇಶನ್ ಬರೆಸಿಕೊಂಡು, ಸಹಿ ಜೊತೆಗೆ ಕಡ್ಡಾಯವಾಗಿ ಹೆಬ್ಬೆಟ್ಟು ಗುರುತು ಪಡೆಯಲೇಬೇಕು. ಹೆಬ್ಬಟ್ಟು ಗುರುತು ನೀಡಲು ಒಪ್ಪದಿದ್ದಲ್ಲಿ ಆಗ ಮತದಾನ ಮಾಡಲು ಅವಕಾಶ ನೀಡಬಾರದು. ಈ ಎಲ್ಲಾ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಬೇಕು. ಫೋಟೋ ತೆಗೆಯಬೇಕೆಂದು ಹಾಗೂ ಇಡೀ ಮತದಾನ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಯಾವುದೆ ಗೊಂದಲಕ್ಕೆ ಅವಕಾಶ ನೀಡದಂತೆ ಮತದಾನ ನಡೆಸಲು ಅಗತ್ಯ ಮಾಹಿತಿ ನೀಡಬೇಕೆಂದು ಸೂಚಿಸಿದರು. ಶಿಬಿರದಲ್ಲಿ ತಹಸೀಲ್ದಾರ್ ವೆಂಕಟಾಚಲಪ್ಪ, ತಾಲೂಕು ಮಟ್ಟದ ಮುಖ್ಯ ತರಬೇತುದಾರ ಪುಟ್ಟಶೆಟ್ಟಿ ಇದ್ದರು.