ಉಪ ನೋಂದಣಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಮೈಸೂರು: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸೇರಿದ ಆಸ್ತಿ ಪರಭಾರೆಗೆ ಸಹಕರಿಸಿದ್ದ ಆರೋಪ ಎದುರಿಸುತ್ತಿರುವ ಉಪನೋಂದಣಾಧಿಕಾರಿ ಗಿರೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು. ಸಿದ್ದಾರ್ಥನಗರದ ವಿನಯ ಮಾರ್ಗದಲ್ಲಿನ ಗಿರೀಶ್ ಮನೆ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ಕೆಲವು ದಾಖಲಾತಿ ಲಭಿಸಿದೆ. ಆದರೆ ಕಾನೂನುಬಾಹಿರವಾಗಿ ನಡೆಸಿದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ದೊರೆತಿಲ್ಲ. ದಾಳಿ ವೇಳೆ ಸ್ವಿಫ್ಟ್ ಕಾರು, ಚಿನ್ನಾಭರಣ ಸೇರಿದಂತೆ ಸುಮಾರು 30 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಪ್ರಕರಣ ಕುರಿತಂತೆ ವಿಚಾರಣೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಜಗದೀಶ್ಪ್ರಸಾದ್ ತಿಳಿಸಿದರು.
ಇನ್ಸ್ಪೆಕ್ಟರ್ ರಾಜಣ್ಣ ಅಮಾನತು
ಮೈಸೂರು: ಗಾಂಜಾ ಬೆಳೆ ಪ್ರಕರಣದಲ್ಲಿ ಶಾಮೀಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಂಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜಣ್ಣ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹುಣಸೂರು ತಾಲೂಕಿನ ನೆಲ್ಲೂರುಪಾಲ ಬಳಿ ಗಾಂಜಾ ಬೆಳೆ ಬೆಳೆದಿದ್ದ ಮಹಿಳೆಯೊಬ್ಬರು ರಾಜಣ್ಣ ಅವರ ಸಂಬಂಧಿ ಎನ್ನಲಾಗಿದೆ. ಹುಣಸೂರು ಠಾಣೆ ಇನ್ಸ್ಪೆಕ್ಟರ್ ಗಜೇಂದ್ರ ಅವರು ಡಿವೈಎಸ್ಪಿ ನಂಜುಂಡ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾಗ ಈ ವಿಷಯ ತಿಳಿದುಬಂದಿದೆ.