ಗೆದ್ದರೆ ಬಸ್ನಲ್ಲಿ ಓಡಾಡುವೆ
ಪಿರಿಯಾಪಟ್ಟಣ: ತಾವು ಗೆದ್ದು ಬಂದಲ್ಲಿ ಸರ್ಕಾರಿ ಭತ್ಯೆಯನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರಿ ಬಸ್ಸಿನಲ್ಲೇ ಓಡಾಡುವ ಮೂಲಕ ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಎಸ್.ಪಿ. ಮಹದೇವಪ್ಪ ಹೇಳಿದರು.
ಕೊಡಗಿನ ಸ್ಥಳೀಯರಿಗೆ ಒಮ್ಮೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಎಲ್ಲ ಪಕ್ಷಗಳನ್ನೂ ಸ್ಥಳೀಯರು ಕೇಳುತ್ತಾ ಬಂದಿದ್ದಾರೆ. ಆದರೆ ಈವರೆಗೆ ಯಾವ ಪಕ್ಷವೂ ಕೊಡಗಿನ ಸ್ಥಳೀಯರಿಗೆ ಟಿಕೆಟ್ ನೀಡಲು ಮುಂದೆ ಬರಲಿಲ್ಲ. ಜೆಡಿಯು ಪಕ್ಷ ತಮಗೆ ಟಿಕೆಟ್ ನೀಡುವ ಮೂಲಕ ಕೊಡಗಿನ ಸ್ಥಳೀಯರಿಗೆ ಲೋಕಸಭೆಗೆ ಹೋಗಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ 8 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು, ರಸ್ತೆ, ರೈಲು ಮಾರ್ಗ ನಿರ್ಮಾಣ, ರೈತರ ಭೂಮಿಗೆ ನೀರಾವರಿ ಸೌಲಭ್ಯಕ್ಕೆ ಕ್ರಮ, ಒಣ ಭೂಮಿ ಅಭಿವೃದ್ಧಿ ಸೇರಿದಂತೆ ಮತ್ತಿತರ ಆಶಯಗಳೊಂದಿಗೆ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರೇಳಿ ಮತ ಕೇಳುತ್ತಿರುವುದಾಗಿ ತಿಳಿಸಿದರು. ರಾಷ್ಟ್ರದಲ್ಲಿ ತೃತೀಯ ರಂಗ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಮತದಾರರು ತಮಗೆ ಮತ ನೀಡುವ ಮೂಲಕ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಪಕ್ಷದ ಪದಾಧಿಕಾರಿಗಳಾದ ಜಿ.ಪ್ರಕಾಶ್, ರಘು, ಮಹದೇವ್, ಚಲುವೇಗೌಡ, ಪುನೀತ್ ಇದ್ದರು.
ಜೆಡಿಯು ಗೆಲುವು ನಿಶ್ಚಿತ
ಹುಣಸೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ತತ್ವಾದರ್ಶ ಮತ್ತು ಅವರ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳೆ ನಮಗೆ ಶ್ರೀರಕ್ಷೆ ಎಂದು ಜಿಲ್ಲಾ ಜೆಡಿಯು ಅಧ್ಯಕ್ಷ ಜಿ.ಪ್ರಕಾಶ್ ಅಭಿಪ್ರಾಯಪಟ್ಟರು. ತಾಲೂಕು ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಮತ್ತು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಯು ಸ್ಪರ್ಧಿಸಿದೆ ಎಂದರು. ಮೈಸೂರು ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಮಹದೇವಪ್ಪ ಮಾತನಾಡಿ, ಯಾವುದೆ ರಾಜಕೀಯ ಪಕ್ಷಗಳು ಕೊಡಗಿನವರಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯತ್ನ ಮಾಡಿಲ್ಲ. ಈ ಬಾರಿ ಜೆಡಿಯು ಆ ಕೆಲಸ ಮಾಡಿದೆ. ರಾಮಕೃಷ್ಣ ಹೆಗಡೆ ಅವರ ತತ್ವಾದರ್ಶ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಿ ನನ್ನ ಗೆಲವು ಖಚಿತ ಎಂದರು. ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಪಾಂಡುಕುಮಾರ್ ಅವರನ್ನು ನೇಮಿಸಲಾಯಿತು. ಜಿ. ಪ್ರಕಾಶ್, ಚಲುವೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಲ್ಲಹಳ್ಳಿ ಮಹದೇವ್, ಜೂನಿಯರ್ ವಿಷ್ಣುವರ್ಧನ್ ಇದ್ದರು.