ದೇವೇಗೌಡರೆ ಮುಂದಿನ ಪಿಎಂ
ಹುಣಸೂರು: ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ಅನಿವಾರ್ಯವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತೆ ಪ್ರಧಾನಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ. ಹರೀಶ್ಗೌಡ ಹೇಳಿದರು.
ತಾಲೂಕಿನ ಗಾವಡಗೆರೆ ಮತ್ತು ಬಿಳಿಕೆರೆಯ ವಿವಿಧ ಗ್ರಾಮಗಳಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಪರ ಮತಯಾಚಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೃತೀಯ ರಂಗದ ಮುಂದಾಳತ್ವ ವಹಿಸಿದ್ದು, ಪ್ರಾದೇಶಿಕ ಪಕ್ಷಗಳು ಬಹುಮತದ ಸ್ಥಾನಗಳನ್ನು ಪಡೆಯಲಿವೆ. ತೃತೀಯ ರಂಗ ಅನಿವಾರ್ಯವಾಗಿ ಸರ್ಕಾರ ರಚನೆಯಾಗಿ ಮತ್ತೆ ಪ್ರಧಾನಮಂತ್ರಿ ಆಗಲಿದ್ದಾರೆ. ಮತದಾರರು ಯಾವುದೆ ಗೊಂದಲಕ್ಕೆ ಮಾನ್ಯತೆ ನೀಡದೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.
ರಾಜ್ಯ ಅಪೆಕ್ಸ್ ಬ್ಯಾಂಕಿನ ಮಾಜಿ ನಿರ್ದೇಶಕ ಬಸವಲಿಂಗಯ್ಯ ಮಾತನಾಡಿದರು. ವಿವಿಧ ಸಮಾಜದ ಮುಖಂಡರಾದ ಜೆ. ತಿಮ್ಮನಾಯ್ಕ, ಸಿದ್ದಲಿಂಗೇಗೌಡ, ಆರ್.ಸ್ವಾಮಿ, ಜ್ಯೋತಿಕುಮಾರ್, ಗೋವಿಂದೇಗೌಡ, ಆರ್. ವಿಶ್ವನಾಥ್, ರಮೇಶ್, ಮುನ್ನ, ಮುಖಂಡರಾದ ಕೆಂಪೇಗೌಡ, ಪುಟ್ಟಮಾದಯ್ಯ ಇದ್ದರು.