ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆಗೆ ಖಂಡನೆ
ಮೈಸೂರು: ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಚುನಾವಣಾ ಸಮೀಕ್ಷೆಗೆಂದು ತೆರಳಿದ್ದ ಹಿರಿಯ ಪತ್ರಕರ್ತರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ನ್ಯಾಯಾಲಯ ಎದುರಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪ್ರತಿಭಟಿಸಿದರು. ಹಿರಿಯ ಪತ್ರಕರ್ತ ಎಂ.ಬಿ. ಮರಮ್‌ಕಲ್ ಅವರು ಏ.10ರ ಸಂಜೆ ಚುನಾವಣಾ ಸಮೀಕ್ಷೆ ನಿಮಿತ್ತ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಹಗರೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಸಾರ್ವಜನಿಕರ ವಾಹನ ತಪಾಸಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಮರಮ್‌ಕಲ್ ಅವರನ್ನು ಎಸ್‌ಐ ಮಂಜುನಾಥ್ ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ಮರಮ್‌ಕಲ್ ತಾವು ಪತ್ರಕರ್ತರು. ಚುನಾವಣಾ ಸಮೀಕ್ಷೆಗೆ ಬಂದಿರುವುದಾಗಿ ತಿಳಿಸಿದ್ದರೂ, ದರ್ಪದಿಂದ ಹಲ್ಲೆ ನಡೆಸಿದ್ದಾರೆ.
ತಮ್ಮ ಮೇಲಿನ ಹಲ್ಲೆಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಏಕಾಏಕಿ ಪೊಲೀಸ್ ವಾಹನದ ಒಳಗೆ ಹತ್ತಿಸಿಕೊಂಡು ಮತ್ತೆ ಹಲ್ಲೆ ನಡೆಸಿ ಮಾರ್ಗ ಮಧ್ಯೆ ಬಿಟ್ಟು ತೆರಳಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕೂಡಲೇ ಚುನಾವಣಾ ಆಯೋಗ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಘದ ಸದಸ್ಯರು ಮನವಿ ಮಾಡಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಧಿಕಾರಿಗಳು ಸಾಮಾನ್ಯ ಜನರ ಮೇಲೂ ತಮ್ಮ ದರ್ಪ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಪೊಲೀಸ್ ಆಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಪತ್ರಕರ್ತರಾದ ಕೆ.ಶಿವಕುಮಾರ್, ಕೃಷ್ಣಕುಮಾರ್, ಮೂಗೂರು ನಂಜುಂಡಸ್ವಾಮಿ, ಚೀ.ಜ. ರಾಜೀವ್, ರಾಮ್, ಕೆ.ಪಿ. ನಾಗರಾಜ್, ಡಿ.ಪಿ. ನಾಗರಾಜ ಶ್ರೇಷ್ಠಿ, ಕೊಳ್ಳೇಗಾಲ ಮಹೇಶ್, ರಾಮಚಂದ್ರ ಗಂಗಾ, ಸುಬ್ರಹ್ಮಣ್ಯ ಇದ್ದರು.